ಗರುಡ ಕಶ್ಯಪ ಮುನಿಯ ಪುತ್ರ. ಈತನ ತಾಯಿ ವಿನತೆ. ಸೂರ್ಯನ ಸಾರಥಿಯಾದ ಅರುಣನು ಈತನ ಅಣ್ಣ. ಗರುಡನ ತಾಯಿ ಆಕೆಯ ಸವತಿಯಾದ ಕದ್ರುವಿಗೆ ದಾಸಿ ಆಗಿದ್ದಳು. ಹಾಗಾಗಿ ಆಕೆಯ ಮಗನಾದ ಗರುಡ ಕದ್ರುವಿನ ಮಾತಿನಂತೆ ನಡೆಯಬೇಕಾಗಿತ್ತು. ಒಮ್ಮೆ ಗರುಡನಿಗೆ ಕದ್ರು ತನ್ನ ಮಕ್ಕಳನ್ನು ಇವನ ಹೆಗಲ ಮೇಲೆ ಕೂಡಿಸಿಕೊಂಡು ಸುತ್ತಾಡಿಸಿ ಬರುವಂತೆ ಹೇಳಿದಳು. ಅದೇ ರೀತಿ ಕದ್ರುವಿನ ಮಕ್ಕಳಾದ ನಾಗಗಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಆಕಾಶಕ್ಕೆ ಹಾರಿ ಬಹಳ ಹೊತ್ತಿನವರೆಗೆ ಸುತ್ತಾಡಿಸಿ ಕೆಳಗಿಳಿದ. ಅಷ್ಟರಲ್ಲಿ ಸೂರ್ಯನ ತಾಪದಿಂದ ಕೆಲವರು ಸತ್ತು ಹೋಗಿದ್ದರು. ಇದರಿಂದ ಕದ್ರು ಗರುಡನನ್ನು ನಿಂದಿಸಿದಳು. ತಾಯಿಯ ಬಳಿಗೆ ಅದನ್ನು ಹೇಳಿಕೊಂಡು, ನಾವು ಏಕೆ ಇವರಿಗೆ ಅಡಿಯಾಳಾಗಿ ಇರಬೇಕು ಎಂದು ಕೇಳಿದ. ಅನಂತರ ನಾನು ಪರಾಕ್ರಮಶಾಲಿ ಆಗಿದ್ದೇನೆ. ನಿನ್ನನ್ನು ದಾಸ್ಯದಿಂದ ಬಿಡಿಸುತ್ತೇನೆ ಎಂದು ಹೇಳಿದ. ಆನಂತರ ಕದ್ರುವಿನ ಬಳಿ ಹೋಗಿ ತನ್ನ ತಾಯಿಯ ದಾಸ್ಯವನ್ನು ತಪ್ಪಿಸಲು ಏನು ಮಾಡಬೇಕು ಎಂದು ಕೇಳಿದ. ಆಗ ಕದ್ರು ನೀನು ಅಮೃತವನ್ನು ತಂದುಕೊಟ್ಟರೆ ಬಿಡುಗಡೆ ಹೊಂದಬಹುದು ಎಂದಳು. ಗರುಡ ದೇವಲೋಕಕ್ಕೆ ಹೋಗಿ ಅಮೃತ ರಕ್ಷಕರನ್ನು ಕೊಂದು, ಇದರ ಸುತ್ತ ಸುತ್ತುತ್ತಿದ್ದ ಚಕ್ರವನ್ನು ಉಪಾಯದಿಂದ ತಪ್ಪಿಸಿಕೊಂಡು, ಇಂದ್ರನ ವಜ್ರಾಯುಧ ಪ್ರಹಾರವನ್ನು ಕೂಡ ಲೆಕ್ಕಿಸದೇ ಅಗ್ನಿಯ ಜ್ವಾಲೆ ಗಳನ್ನು ಮೀರಿ ಸೂಕ್ಷ್ಮ ರೂಪದಿಂದ ಒಳಹೊಕ್ಕು, ಅಮೃತ ಕಲಶವನ್ನು ತೆಗೆದುಕೊಂಡು ಹೊರಟ. ಇಂದ್ರ ಗರುಡನ ಪರಾಕ್ರಮವನ್ನು ನೋಡಿ, ಇವನ ಸಾಮರ್ಥ್ಯಕ್ಕೆ ಮೆಚ್ಚಿ, ಸ್ನೇಹಭಾವದಿಂದ ಅಮೃತವನ್ನು ಸರ್ಪಗಳ ವಶ ಮಾಡಬೇಡ ಎಂದ. ಆಗ ಗರುಡ ತನ್ನ ತಾಯಿಯ ದಾಸ್ಯವನ್ನು ಬಿಡಿಸಲು ಅಮೃತವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ
ಎಂದ.
ಇಂದ್ರ ಅದಕ್ಕೆ ಸಮ್ಮತಿಸಿ, ಸರ್ಪಗಳು ಗರುಡನಿಗೆ ಆಹಾರ ವಾಗುವಂತೆ ವರವನ್ನು ನೀಡಿದ. ಗರುಡ ಅಮೃತ ಕಲಶವನ್ನು ಕದ್ರುವಿಗೆ ತಲುಪಿಸಿ ತನ್ನ ತಾಯಿಗೆ ದಾಸ್ಯವನ್ನು ಕೊನೆಗೊಳಿಸಿದ. ಗರುಡ ತಂದ ಅಮೃತ ಕಲಶವನ್ನು ದರ್ಭೆಯ ಮೇಲೆ ಇಡಲಾಗಿ ಕದ್ರು ತನ್ನ ಮಕ್ಕಳಿಗೆ ಸ್ನಾನವನ್ನು ಮಾಡಿ ಬರುವಂತ ಹೇಳಿದಳು. ಸರ್ಪಗಳು ಸ್ನಾನಕ್ಕೆ ಹೋದಾಗ ಇಂದ್ರ ಅಮೃತ ಕಲಶವನ್ನು ಅಪಹರಿಸಿದ. ಸರ್ಪಗಳು ಪುನಃ ಬಂದು ನೋಡಿದಾಗ ಅಮೃತ ಇಲ್ಲದ್ದನ್ನು ಕಂಡು ದರ್ಭೆಗಳನ್ನು ನಕ್ಕಿದಾಗ ಅವರ ನಾಲಿಗೆ ಎರಡು ಪಾಲಾಯಿತು. ಗರುಡನ ಸಾಮರ್ಥ್ಯವನ್ನು ನೋಡಿ ವಿಷ್ಣು ಗರುಡನನ್ನು ತನ್ನ ವಾಹನವನ್ನಾಗಿ ಸಿಕೊಂಡನು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ