ಕಾಲನೇಮಿ
ಈತ ರಾವಣನ ಸೋದರಮಾವನಾದ ಮಾರೀಚನ ಮಗ. ರಾಮ ರಾವಣರ ಯುದ್ಧ ನಡೆಯುತ್ತಿರುವಾಗ ರಾವಣನ ಶಕ್ತ್ಯಾಯುಧ ಪ್ರಹಾರದಿಂದ ಲಕ್ಷ್ಮಣ ಮೂರ್ಛಿತನಾದ. ಆಗ ಸುಷೇಣ ಎಂಬ ವೈದ್ಯ ಸಂಜೀವಿನಿ ಲತೆಯಿಂದ ಲಕ್ಷ್ಮಣನನ್ನು ಬದುಕಿಸಬಹುದು ಎಂದಾಗ ಹನುಮಂತ ಸಂಜೀವಿನಿ ಲತೆಯನ್ನು ತರಲು ಚಂದ್ರದ್ರೋಣ ಎಂಬ ಪರ್ವತಕ್ಕೆ ಹೊರಟ. ಈ ಸಮಾಚಾರವನ್ನು ಬೇಹುಗಾರರ ಮೂಲಕ ತಿಳಿದ ರಾವಣ ಕಾಲನೇಮಿಯನ್ನು ಕರೆದು ಚಂದ್ರದ್ರೋಣ ಪರ್ವತಕ್ಕೆ ತೆರಳಿ ಅಲ್ಲಿ ಬರುವ ಹನುಮಂತನಿಗೆ ವಿಘ್ನವನ್ನು ಉಂಟುಮಾಡಿ ಹೇಗಾದರೂ ಬೆಳಗಾಗುವವರೆಗೆ ಕಾಲಹರಣ ಮಾಡಿಸು ಎಂದು ಹೇಳಿ ಕಳುಹಿಸಿದ. ಕಾಲನೇಮಿ ಹನುಮಂತನಿಗಿಂತಲೂ ಮೊದಲೇ ಚಂದ್ರದ್ರೋಣ ಪರ್ವತವನ್ನು ತಲುಪಿ ಅಲ್ಲಿ ತನ್ನ ಮಾಯೆಯಿಂದ ಪರ್ಣಶಾಲೆಯನ್ನು ನಿರ್ಮಿಸಿ ಮುನಿವೇಷದಿಂದ ಹನುಮಂತನನ್ನು ಎದುರುಗೊಂಡ. ಹಾಗೆಯೇ ಹನುಮಂತನನ್ನು ಆದರಿಸಿ ನೀನು ಬಹಳ ದಣಿದು ಬಂದಿರುವೆ ನೀನೇನೂ ಚಿಂತಿಸುವ ಅಗತ್ಯವಿಲ್ಲ ಈಗಾಗಲೇ ಲಕ್ಷ್ಮಣ ಬದುಕಿರುತ್ತಾನೆ. ಇದನ್ನು ನನ್ನ ಯೋಗಶಕ್ತಿಯಿಂದ ತಿಳಿದಿದ್ದೇನೆ, ನೀನು ಸಮೀಪದಲ್ಲಿಯೇ ಇರುವ ಕೊಳದಲ್ಲಿ ವಿಶ್ರಮಿಸಿಕೊಂಡು ನಿಧಾನವಾಗಿ ಬೇಕಾದ ಮೂಲಿಕೆಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಉಪಚರಿಸಿದ. ಹನುಮಂತ ದಣಿವಾರಿಸಿಕೊಳ್ಳಲು ಮುನಿಯ ಮಾತಿನಂತೆ ಕೊಳದಲ್ಲಿ ಇಳಿದಾಗ ಅಲ್ಲಿದ್ದ ಮೊಸಳೆ ಹನುಮಂತನನ್ನು ಹಿಡಿಯಿತು. ಹನುಮಂತ ಮೊಸಳೆಯನ್ನು ಕೊಂದಾಗ ಅದರಿಂದ ಶಾಪ ವಿಮೋಚನೆಯಾದ ಗಂಧರ್ವನೊಬ್ಬ ಹೊರಬಂದ. ಶಾಪವಿಮೋಚನೆಯನ್ನು ಹೊಂದಿದ ಗಂಧರ್ವ ಹನುಮಂತನಿಗೆ ಕಾಲನೇಮಿಯ ಮಾಯಾ ವಿಚಾರವನ್ನೂ, ಉದ್ದೇಶವನ್ನೂ ತಿಳಿಸಿ ತನ್ನ ಲೋಕಕ್ಕೆ ತೆರಳಿದ. ಹನುಮಂತ ಕಾಲನೇಮಿಯನ್ನು ಸಂಹರಿಸಿದ. ಸಂಜೀವಿನಿ ಲತೆ ಯಾವುದೆಂದು ಗುರುತಿಸಲು ಕಷ್ಟವಾಗಿ ಪರ್ವತವನ್ನೇ ಕಿತ್ತು ಅದನ್ನು ಹೊತ್ತು ತಂದ. ಆಗ ವೈದ್ಯನಾದ ಸುಷೇಣ ಸಂಜೀವಿನಿ ಲತೆಯನ್ನು ಬಳಸಿ ಲಕ್ಷ್ಮಣನನ್ನು ಬದುಕಿಸಿದ. ಹೀಗೆ ಹನುಮಂತನಿಂದ ಮಾಯಾವಿಯಾದ ಕಾಲನೇಮಿಯ ಅಂತ್ಯವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ