ನಾಳೀಜಂಘ ಬಕ
ಹಿಮಾಲಯದಲ್ಲಿ ವಾಸಮಾಡುತ್ತಿದ್ದ ಬಹು ದೀರ್ಘಕಾಲ ಬದುಕಿದ ಒಂದು ಬಕಪಕ್ಷಿ. ಹಿಂದೆ ಪರಾಶರ ಮುನಿ ವಂಶದ ವಿಶ್ವರೂಪ ಎಂಬ ಬ್ರಾಹ್ಮಣನಿಗೆ ಬಕ ಎಂಬ ಮಗನಿದ್ದ. ಉತ್ತರಾಯಣ ಪರ್ವದಲ್ಲಿ ತಂದೆ ಪೂಜೆಯನ್ನು ಮಾಡುತ್ತಿದ್ದಾಗ ಈತ ಶಿವಲಿಂಗವನ್ನು ತೆಗೆದು ತುಪ್ಪದ ಪಾತ್ರೆಯಲ್ಲಿ ಹಾಕಿದ. ಮರುದಿನ ತಂದೆ ಪೂಜೆ ಮಾಡುವಾಗ ಶಿವಲಿಂಗವನ್ನು ಕಾಣದೇ ಮಗನನ್ನು ಪ್ರೀತಿಯಿಂದ ವಿಚಾರಿಸಲಾಗಿ ಶಿವಲಿಂಗವನ್ನು ತುಪ್ಪದ ಪಾತ್ರೆಯಲ್ಲಿ ಅಡಗಿಸಿಟ್ಟಿದ್ದನ್ನು ತಿಳಿಸಿದ. ಉತ್ತರಾಯಣದ ಕಾಲದಲ್ಲಿ ಶಿವಲಿಂಗವನ್ನು ತುಪ್ಪದ ಪಾತ್ರೆಯಲ್ಲಿ ಇಟ್ಟ ಪುಣ್ಯದ ಪರಿಣಾಮದಿಂದ ಮರುಜನ್ಮದಲ್ಲಿ ಅನರ್ತ ದೇಶದ ರಾಜನ ಮಗನಾದ. ಪೂರ್ವಜನ್ಮದ ಸ್ಮರಣೆಯಿಂದ ದೇವಪೂಜೆಯ ನಂತರ ಪ್ರತಿನಿತ್ಯವೂ ಕೂಡ ಶಿವಲಿಂಗವನ್ನು ತುಪ್ಪದ ಪಾತ್ರೆಯಲ್ಲಿ ಮುಳುಗಿಸಿಡುತ್ತಿದ್ದ. ಈತನ ಪೂಜೆಯಿಂದ ಸಂತುಷ್ಟನಾದಂತಹ ಶಿವ ಪ್ರತೀಪ ಪಾಲಕ ಎಂಬ ಹೆಸರನ್ನಿಟ್ಟು ತನ್ನ ಗಣದಲ್ಲಿ ಸೇರಿಸಿಕೊಂಡ. ಹೀಗೆ ಶಿವಪೂಜೆಯ ಮಹಿಮೆಯಿಂದ ಈತ ಶಿವ ಗಣದಲ್ಲಿ ಸೇರಿದ. ಹೀಗಿರಲಾಗಿ, ಒಮ್ಮೆ ಹಿಮಾಲಯ ಪರ್ವತದ ಪ್ರಾಂತ್ಯದಲ್ಲಿ ಈತ ಸಂಚರಿಸುತ್ತಿದ್ದಾಗ, ಗಾಲವ ಮುನಿಯ ಪತ್ನಿಯನ್ನು ಕಂಡು, ಆಕರ್ಷಣೆಯನ್ನು ಹೊಂದಿ, ಗಾಲವಮುನಿಯ ಶಿಷ್ಯನಾಗಿ ಸೇವೆಯನ್ನು ಮಾಡಿಕೊಂಡಿದ್ದ. ಒಮ್ಮೆ ಗಾಲವ ಮುನಿಗಳು ಇಲ್ಲದ ಸಂದರ್ಭದಲ್ಲಿ ಅವರ ಪತ್ನಿಯನ್ನು ಅಪಹರಿಸಲು ಹೊರಟನು. ಇದನ್ನು ತಿಳಿದ ಗಾಲವ ಮುನಿಗಳು ತನ್ನ ಶಿಷ್ಯನಾಗಿದ್ದು ಬಕನಂತೆ ಸಂದರ್ಭಕ್ಕಾಗಿ ಕಾದು ತನ್ನ ಕಾರ್ಯವನ್ನು ನೆರವೇರಿಸಿಕೊಳ್ಳುವಂತಹ ಗುಣವನ್ನು ಹೊಂದಿರುವ ನೀನು ಬಕನಾಗಿ ಜನಿಸು ಎಂಬ ಶಾಪವನ್ನು ನೀಡಿದರು. ನಂತರ ಈತ ಗಾಲವ ಮುನಿಗಳ ಮೊರೆಹೊಕ್ಕು, ಅವರ ಅನುಗ್ರಹದಿಂದ ಇಂದ್ರದ್ಯುಮ್ನ ಮಹಾರಾಜನನ್ನು ಭೇಟಿಯಾದಾಗ ನೀನು ಶಾಪ ವಿಮೋಚನೆಯನ್ನು ಹೊಂದುವೆ ಎಂದು ಹೇಳಲ್ಪಟ್ಟ. ನಂತರ ಅನೇಕ ಕಾಲಗಳ ವರೆಗೆ ನಾಳೀಜಂಘ ಎಂಬ ಹೆಸರಿನಿಂದ ಬಕ್ನಾಗಿಯೇ ಜೀವನವನ್ನು ಕಳೆದ. ಆನಂತರ ಇಂದ್ರದ್ಯುಮ್ನ ಮಹಾರಾಜನ ಭೇಟಿಯಾದಾಗ ತನ್ನ ಶಾಪ ವಿಮೋಚನೆಯನ್ನು ಹೊಂದಿದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ