ಜರತ್ಕಾರು
ಬ್ರಗು ವಂಶದಲ್ಲಿ ಹುಟ್ಟಿದ ಯಾಯಾವರ ವಂಶೋತ್ಪನ್ನನಾದ ಒಬ್ಬ ಋಷಿ ಜರತ್ಕಾರು. ತಪಸ್ಸಿನಿಂದ ತನ್ನ ದೇಹವನ್ನು ತುಂಬಾ ಜೀರ್ಣಗೊಳಿಸಿದ್ದರಿಂದ ಇವನಿಗೆ ಜರತ್ಕಾರು ಎಂಬ ಹೆಸರು ಬಂತು. ಈತ ಬ್ರಹ್ಮಚರ್ಯ ಆಶ್ರಮವನ್ನು ಹೊಂದಿದ್ದು ನಂತರ ನೇರವಾಗಿ ಸನ್ಯಾಸಾಶ್ರಮವನ್ನು ಹೊಂದುತ್ತೇನೆ ಎಂದು ನಿರ್ಧರಿಸಿದ್ದ. ಒಂದು ಹಳ್ಳಿಯಲ್ಲಿ ಒಂದು ರಾತ್ರಿ ಮಾತ್ರ ಇರುತ್ತಿದ್ದ ಈತನಿಗೆ ಮದುವೆಯ ಬಗ್ಗೆ ಯೋಚನೆ ಇರಲಿಲ್ಲ. ಒಮ್ಮೆ ಈತ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಪಿತೃ ದೇವತೆಗಳು ಕೆಲವು ಬಳ್ಳಿಗಳನ್ನು ಹಿಡಿದು ನೇತಾಡುತ್ತಿರುವುದನ್ನು ನೋಡಿದ. ಒಂದು ಇಲಿ ಆ ಬಳ್ಳಿಯ ಭಾಗವನ್ನು ಕತ್ತರಿಸುತ್ತಿತ್ತು. ಅವರನ್ನು ನೀವು ಯಾರು ಎಂದು ಕೇಳಿದಾಗ ಅವರು ಯಾಯಾವರ ಎಂಬ ಋಷಿಗಳು ನಾವು. ಈ ಬಳ್ಳಿ ನಮ್ಮ ಸಂತತಿಯಂತೆ. ಅದನ್ನು ಕಾಲವೆಂಬ ಇಲಿ ಕಡಿಯುತ್ತಿದೆ. ನಮ್ಮ ವಂಶದಲ್ಲಿ ಜರತ್ಕಾರು ಎಂಬುವವನು ಸಂತತಿಯನ್ನು ಹೊಂದಿರದ ಕಾರಣ ಅವನು ನಮ್ಮ ಋಣವನ್ನು ತೀರಿಸುತ್ತಿಲ್ಲ. ಹಾಗಾಗಿ ನಾವು ಅನಾಥರಾಗಿದ್ದೇವೆ ಎಂದು, ನೀನು ಯಾರು ಎಂದು ಪ್ರಶ್ನಿಸಿದರು. ಆಗ ಜರತ್ಕಾರು ತಾನೆ ಆ ಜರತ್ಕಾರು ಎಂದ. ನಿಮ್ಮ ಋಣವನ್ನು ಹೇಗೆ ತೀರಿಸಬೇಕು ಎಂದು ತಿಳಿಸಿರಿ ಎಂದ. ಆಗ ಪಿತೃದೇವತೆಗಳು ಸಂತತಿಯಿಂದ ಸದ್ಗತಿ ಪ್ರಾಪ್ತವಾಗುತ್ತದೆ. ಪಿತೃ ಋಣದಿಂದ ಮುಕ್ತಿ ಸಿಗುತ್ತದೆ. ಹಾಗಾಗಿ ನೀನು ಮದುವೆಯಾಗು ಎಂದರು. ಜರತ್ಕಾರು ಇದಕ್ಕೆ ಒಪ್ಪಿ ನನ್ನ ಹೆಸರನರಿನವಳನ್ನೇ ಮದುವೆಯಾಗುವೆ ಹಾಗೂ ಹಿರಿಯರು ತಾವೇ ಬಂದು ನನಗೆ ಮದುವೆಯನ್ನು ಮಾಡಿಸಬೇಕು ಎಂದು ಶರತ್ತುಗಳನ್ನು ಹೇಳುತ್ತಾ ಊರೂರು ತಿರುಗಿದ. ವಾಸುಕಿ ಎಂಬ ಸರ್ಪರಾಜನಿಗೆ ಜರತ್ಕಾರು ಎಂಬ ಸೋದರಿ ಇರುವಳು ಎಂದು ತಿಳಿದು ಅಲ್ಲಿಗೆ ಹೋದ. ನಾಗರಾಜ ತನ್ನ ಜರತ್ಕಾರು ಎಂಬ ತಂಗಿಯನ್ನು ಈತನಿಗೆ ಮದುವೆ ಮಾಡಿಕೊಟ್ಟ. ಬಳಿಕ ಜರತ್ಕಾರು ಈಕೆಯನ್ನು ಕರೆದುಕೊಂಡು ತನ್ನ ಆಶ್ರಮವನ್ನು ಸೇರಿದ. ಒಮ್ಮೆ ಸಂಧ್ಯಾ ಸಮಯದಲ್ಲಿ ಜರತ್ಕಾರು ಋಷಿ ನಿದ್ರಿಸುತ್ತಿರುವಾಗ ಸೂರ್ಯಾಸ್ತವಾಯಿತು. ಸಂಧ್ಯಾವಂದನೆಯ ಸಮಯ ಮೀರಿ ಹೋಗುವುದೆಂದು ತಿಳಿದು ಜರತ್ಕಾರು ಪತಿಯನ್ನು ಎಬ್ಬಿಸಿದಳು. ಇದರಿಂದ ಅಪಮಾನಿತನಾದ ಜರತ್ಕಾರು ಮುನಿ ಪತ್ನಿಯನ್ನು ಬಿಟ್ಟು ತೆರಳಿದ. ಆಗ ಜರತ್ಕಾರು ಗರ್ಭಿಣಿಯಾಗಿದ್ದಳು. ಆನಂತರ ಆಸ್ತೀಕ ಎಂಬ ಪುತ್ರನನ್ನು ಹೆತ್ತಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ