24 ಕರಂಧಮನ ಕಥೆ Karandhamana Kathe


ಕರಂಧಮ ಎನ್ನುವವನು ಒಬ್ಬ ಕ್ಷತ್ರಿಯ. ಸೂರ್ಯವಂಶದ ರಾಜ. ಈತನ ತಂದೆ ಖನಿನೇತ್ರ. ಖನಿನೇತ್ರ ತನ್ನ ಮಗನಿಗೆ ಸುವರ್ಚ ಎಂದು ನಾಮಕರಣ ಮಾಡಿದ್ದ. ಒಮ್ಮೆ ಸುವರ್ಚನು ಶತ್ರುಗಳನ್ನು ಸಂಹರಿಸಲು ಹೊರಟ. ಆಗ ಪ್ರಬಲವಾದ ಶತ್ರುವನ್ನು ಎದುರಿಸುತ್ತ ಸೋಲಿನ ಹಂತವನ್ನು ತಲುಪಿದ. ಆಗ ತನ್ನ ಹಸ್ತಗಳನ್ನು ಶಂಖದಂತೆ ಮಾಡಿ ಊದಿದ ಹಾಗೆಯೇ ತನ್ನ ಕೈಗಳನ್ನು ಕೊಡವಿ ಅಪಾರವಾದ ಸೈನ್ಯವನ್ನು ಸೃಷ್ಟಿಮಾಡಿ ಶತ್ರುಗಳನ್ನು ಬಗ್ಗುಬಡಿದ. ಇದರಿಂದ ಈತನಿಗೆ ಕರಂಧಮ ಎಂಬ ಹೆಸರು ಬಂತು. ಈತನು ವೀರ್ಯಚಂದ್ರನ ಮಗಳಾದ ವೀರೆ ಎಂಬುವವಳನ್ನು ಮದುವೆಯಾದ. ಇವರ ಪುತ್ರ ಅವಿಕ್ಷಿತ. ಅವಿಕ್ಷಿತ ಯುವಕನಾಗಿ ವಿಶಾಲತನಯೆ ಎಂಬ ರಾಜಕುಮಾರಿಯ ಸ್ವಯಂವರಕ್ಕೆ ಹೋದ. ಅಲ್ಲಿನ ಅರಸರೆಲ್ಲ ಸೇರಿ ಇವನನ್ನು ಸೆರೆಹಿಡಿದರು. ಆಗ ಆತನ ತಂದೆಯಾದ ಕರಂಧಮ ಎಲ್ಲಾ ರಾಜರನ್ನು ಸೋಲಿಸಿ ಅವಿಕ್ಷಿತನನ್ನು ಕರೆದುಕೊಂಡು ಬಂದ. ಈ ಎಲ್ಲಾ ಘಟನೆಗಳಿಂದ ಮನನೊಂದ ಅವಿಕ್ಷಿತ, ನಾನು ಬ್ರಹ್ಮಚಾರಿಯಾಗಿಯೇ ಜೀವನವನ್ನು ಕಳೆಯುತ್ತೇನೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ. ಕರಂಧಮ ಹಾಗೂ ವೀರೆಯರು ಎಷ್ಟು ತಿಳಿಹೇಳಿದರೂ ಅವಿಕ್ಷಿತ ತನ್ನ ಮನಸ್ಸನ್ನು ಬದಲಾಯಿಸಲಿಲ್ಲ. ಹೀಗಿರಲಾಗಿ ಅವಿಕ್ಷಿತನ ತಾಯಿ ಕಿಮಿಚ್ಛಕ ಎಂಬ ವ್ರತವನ್ನು ಕೈಗೊಂಡಳು. ಯಾರು ಏನನ್ನು ಬೇಡಿದರೂ ಕೊಡುವೆನು ಎಂದು ಈ ವೃತದ ಅರ್ಥ. ಅವಿಕ್ಷಿತ ತಾಯಿಯ ಮಾತನ್ನು ನಾನು ನಡೆಸುತ್ತೇನೆ ಎಂದು ಎಲ್ಲೆಡೆ ಡಂಗುರ ಹೊಡೆಸಿದ. ಆಗ ಕರಂಧಮ ಮಗನ ಬಳಿ ಬಂದು ನನಗೆ ಮೊಮ್ಮಗನನ್ನು ಕೊಡು ಎಂದಾಗ ಅವಿಕ್ಷಿತ ಅನಿವಾರ್ಯವಾಗಿ ಮದುವೆಯಾಗಬೇಕಾಯಿತು. ತಂದೆಯ ಮಾತಿನಂತೆ ಆತ ವಿಶಾಲತನಯೆಯನ್ನು ಮದುವೆಯಾದ. ನಂತರ ಮರುತ್ತ ಎಂಬ ಮಗನನ್ನು ಪಡೆದ. ಕರಂಧಮ ರಾಜನು ಅನೇಕ ಯಜ್ಞಯಾಗಾದಿಗಳನ್ನು ಮಾಡಿ ನಂತರ ಸದ್ಗತಿಯನ್ನು ಪಡೆದ.





ಕಾಮೆಂಟ್‌ಗಳು