ಯವಕ್ರೀತ ಭರದ್ವಾಜ ಋಷಿಯ ಮಗ. ಈತ ಅತ್ಯಂತ ಮಹತ್ವಾಕಾಂಕ್ಷಿ. ಕಷ್ಟಪಟ್ಟು ವೇದಾಧ್ಯಯನವನ್ನು ಮಾಡುವುದರ ಬದಲಾಗಿ ವೇದಗಳನ್ನು ಗುರುಗಳಿಲ್ಲದೇ ಕಲಿಯಬೇಕು ಎಂದು ತಪಸ್ಸಿಗೆ ತೊಡಗಿದ. ಇವನಿಗೆ ಯಾರ ಬುದ್ಧಿವಾದವೂ ಹಿಡಿಸಲಿಲ್ಲ. ಇಂದ್ರನನ್ನು ಕುರಿತು ಕಠಿಣ ತಪಸ್ಸನ್ನು ಆಚರಿಸಲು ತೊಡಗಿದ. ಅವನಿಗೆ ಬುದ್ಧಿ ಕಲಿಸಬೇಕು ಎಂದು ಇಂದ್ರ ನಿಶ್ಚಯಿಸಿದ. ಒಮ್ಮೆ ಯವಕ್ರೀತ ಸ್ನಾನ ಮಾಡಿ ಬರುತ್ತಿರುವಾಗ ನದಿಯ ತಟದಲ್ಲಿ ವೃದ್ಧನೊಬ್ಬ ಮರಳನ್ನು ಗುಡ್ಡೆ ಹಾಕುತ್ತಿದ್ದ. ಯವಕ್ರೀತನಿಗೆ ಕುತೂಹಲವಾಯಿತು. ಏನು ಮಾಡುತಿದ್ದಿಯ ಎಂದು ಕೇಳಿದಾಗ ವೃದ್ಧ ಹೇಳಿದ, ಪರೋಪಕಾರಕ್ಕಾಗಿ ಈ ಮರಳಿನಿಂದ ಸೇತುವೆ ಕಟ್ಟುತ್ತಿದ್ದೇನೆ ಎಂದು. ಇದನ್ನು ಕೇಳಿ ಬಿದ್ದು ಬಿದ್ದು ನಕ್ಕ ಯವಕ್ರೀತ ಮರಳಿನಿಂದ ಯಾರಾದರೂ ಸೇತುವೆಯನ್ನು ಕಟ್ಟುತ್ತಾರೆಯೇ? ಎಂದು ಕೇಳಿದ. ಆಗ ವೃದ್ಧನ ರೂಪದಲ್ಲಿದ್ದ ಇಂದ್ರ ಏಕೆ ಕಟ್ಟಲಾರದು. ಗುರು ಗಳಿಲ್ಲದೇ ವೇದಾಧ್ಯಯನ ಸಾಧ್ಯವಾಗುವುದಾದರೆ ಮರಳಿನಿಂದ ಸೇತುವೆ ಕಟ್ಟಲು ಏಕೆ ಸಾಧ್ಯವಿಲ್ಲ? ಎಂದು ಕೇಳಿದ. ಹಾಗೆಯೇ ಇಂದ್ರ ಪ್ರತ್ಯಕ್ಷನಾದ. ಗುರುಗಳ ಸನ್ನಿಧಿಯಿಂದಲೇ ಶಾಸ್ತ್ರಜ್ಞಾನವನ್ನು ಪಡೆ. ಆಗ ಗುರು ಸೇವೆಯಿಂದ ಬಂದ ಶಮದಮಾದಿ ಗುಣಗಳು ಕೂಡಿಕೊಂಡು ಗುರುಗಳ ಸಾಮೀಪ್ಯದ ಅನುಗ್ರಹವೂ ಆಗುವುದು ಎಂದ. ಆದರೆ ಯವಕ್ರೀತ ಇದಕ್ಕೆ ಒಪ್ಪದೇ ನಿನ್ನ ಮಾತು ಸತ್ಯವಿರಬಹುದು. ಆದರೆ ನನಗೆ ಗುರುವಿಲ್ಲದೆ ಶಾಸ್ತ್ರಜ್ಞಾನವನ್ನು ನೀಡಲೇಬೇಕು ಎಂದು ಪಟ್ಟುಹಿಡಿದು ಕೇಳಿದಾಗ ಇಂದ್ರ ಅನಿವಾರ್ಯವಾಗಿ ಈತನಿಗೆ ಶಾಸ್ತ್ರಜ್ಞಾನವನ್ನು ಅನುಗ್ರಹಿಸಿದ. ಹೀಗೆ ಅನಾಯಾಸವಾಗಿ ದೊರೆತ ವಿದ್ಯೆಯಿಂದ ಗರ್ವಿತನಾದ ಯವಕ್ರೀತ ರೈಭ್ಯಮುನಿಯ ಸೊಸೆಯನ್ನು ನೋಡಿ ಮೋಹಗೊಂಡು ಅವಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ. ಈ ಅಪರಾಧದಿಂದ ಕ್ರುದ್ಧನಾದ ರೈಭ್ಯಮುನಿ ಈತನ ನಾಶಕ್ಕಾಗಿ ಭೂತವೊಂದನ್ನು ಸೃಷ್ಟಿಸಿದ. ಅದು ಯವಕ್ರೀತನನ್ನು ನಾಶಪಡಿಸಲು ಹೊಂಚುಹಾಕುತ್ತಿತ್ತು. ಒಮ್ಮೆ ಅವನನ್ನು ಅಟ್ಟಿಸಿಕೊಂಡು ಬರಲು ಈತ ಓಡಿ ತನ್ನ ತಂದೆಯ ಹೋಮ ಶಾಲೆಯನ್ನು ಪ್ರವೇಶಿಸುತ್ತಿರುವ ಆಗ ಭೂತವು ಯವಕ್ರೀತ ನನ್ನು ಶೂಲದಿಂದ ಇರಿದು ನಾಶಮಾಡಿತು. ಹೀಗೆ ಅನಾಯಾಸವಾಗಿ ದೊರೆತ ದ್ಯೆ ಅಪಾಯಕ್ಕೆ ಎಡೆಮಾಡಿಕೊಟ್ಟಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ