26 ಕಚನ ಕಥೆ Kacha


ದೇವಗುರುವಾದ ಬೃಹಸ್ಪತಿ ಆಚಾರ್ಯರ ಹಿರಿಯ ಮಗ ಕಚ.  ದೇವತೆಗಳು ಹಾಗೂ ಅಸುರರಲ್ಲಿ ನಿರಂತರ ಯುದ್ಧ ನಡೆಯುತ್ತಿತ್ತು. ಶುಕ್ರಾಚಾರ್ಯರು ಸಂಪಾದಿಸಿದ ಮೃತಸಂಜೀವಿನಿ ವಿದ್ಯೆಯಿಂದ ಅವರು ಸತ್ತಿರುವ ರಾಕ್ಷಸರನ್ನೆಲ್ಲಾ ಮತ್ತೆ ಬದುಕಿ್ಸುತ್ತಿದ್ದರು. ಇದು ದೇವತೆಗಳನ್ನು ಚಿಂತೆಗೀಡುಮಾಡಿತು. ಮೃತಸಂಜೀವಿನಿ ವಿದ್ಯೆಯನ್ನು ನಾವು ಸಂಪಾದಿಸಬೇಕು ಆದರೆ ದಾರಿ ಹೇಗೆ ಎಂದು ಚಿಂತಿಸುತ್ತಿದ್ದರು. ಕಚ ದೇವತೆಗಳಿಗೆ ಶುಭವಾಗುವುದಾದರೆ ಈ ಕಾರ್ಯವನ್ನು ನಾನು ಮಾಡುತ್ತೇನೆ ಎಂದ. ಬೃಹಸ್ಪತಿ ಸಂಜೀವಿನಿ ವಿದ್ಯೆಯನ್ನು ನೀನು ಕಲಿತು ಬಂದಲ್ಲಿ ನಿನಗೂ ಹವಿರ್ಭಾಗ ಸಿಗುವುದು ಎಂದರು ಹಾಗೂ ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನು ಸಂತೋಷ ಪಡಿಸಿದರೆ ವಿದ್ಯೆಯನ್ನು  ಪಡೆಯುವುದು ಸುಲಭ ಎಂದು ತಿಳಿಸಿದರು. ಕಚ ಶುಕ್ರಾಚಾರ್ಯರ ಶಿಷ್ಯನಾಗಿ ಬ್ರಹ್ಮಚರ್ಯ ವ್ರತವನ್ನು ಕೈಗೊಂಡು ಗುರುಕುಲ ವಾಸವನ್ನು ಮಾಡುತ್ತಿದ್ದ. ಗುರುಗಳ ಸೇವೆಯನ್ನು ಮಾಡುವುದರ ಜೊತೆ ದೇವಯಾನಿಗೂ ಪ್ರಿಯವಾಗುವಂತಹ ಕೆಲಸವನ್ನು ಮಾಡಿ ದೇವಯಾನಿಯ ಪ್ರೀತಿಯನ್ನು ಸಂಪಾದಿಸಿದ. ಶುಕ್ರಾಚಾರ್ಯರು ದೇವಗುರು ಬೃಹಸ್ಪತಿಯ ಮಗನನ್ನು ಶಿಷ್ಯನನ್ನಾಗಿಸಿಕೊಂಡಿದ್ದು ಅಸುರರಿಗೆ ಇಷ್ಟವಾಗಲಿಲ್ಲ. ಆದ್ದರಿಂದ ಹೇಗಾದರೂ ಕಚನನ್ನು ನಿವಾರಿಸಬೇಕು ಎಂದು ಹೊಂಚುಹಾಕುತ್ತಿದ್ದರು. ಒಮ್ಮೆ ಕಚ ಶುಕ್ರಾಚಾರ್ಯರ ದನಗಳನ್ನು ಮೇಯಿಸುತ್ತಿದ್ದಾಗ ಕಚ ನನ್ನು ಕೊಂದು ಆತನ ದೇಹವನ್ನು ಕತ್ತರಿಸಿ ನಾಯಿಗಳಿಗೆ ಹಾಕಿದರು. ಸಾಯಂಕಾಲ ಹಸುಗಳು ಮನೆಗೆ ಬಂದರೂ ಕಚ ಬರೆದಿರುವುದನ್ನು ತಿಳಿದು ದೇವಯಾನಿ ಶುಕ್ರಾಚಾರ್ಯರಲ್ಲಿ ಮೊರೆಯಿಟ್ಟಳು. ಶುಕ್ರಾಚಾರ್ಯರು ಯೋಗದೃಷ್ಟಿಯಿಂದ ತಿಳಿದು ಮಂತ್ರಬಲದಿಂದ ಕಚನನ್ನು ಬದುಕಿಸಿದರು. ಕಚ ಜೀವಂತವಾಗಿ ಬಂದ. ಇನ್ನೊಂದು ಬಾರಿ ಕಚ ಹೂವು ಕೊಯ್ದು ತರಲು ಅರಣ್ಯಕ್ಕೆ ಹೋದಾಗ ಅಸುರರು ಅವನನ್ನು ಕೊಂದು ತುಂಡುಮಾಡಿ ಸಮುದ್ರಕ್ಕೆ ಎಸೆದರು. ಈ ಬಾರಿಯೂ ಶುಕ್ರಾಚಾರ್ಯರ ಮಂತ್ರಬಲದಿಂದ ಬದುಕಿ ಬಂದ. ಮೂರನೆಯ ಬಾರಿ ರಾಕ್ಷಸರು ಕಚ ನನ್ನು ಕೊಂದು ಅವನನ್ನು ಸುಟ್ಟು ಬೂದಿ ಮಾಡಿ ಸುರೆಯಲ್ಲಿ ಕರಡಿ ಅದನ್ನು ಶುಕ್ರಾಚಾರ್ಯರಿಗೆ ಕುಡಿಸಿದರು. ಸಾಯಂಕಾಲವಾದರೂ ಕಚ ಬರಲಿಲ್ಲ. ದೇವಯಾನಿಯ ಒತ್ತಾಯದಿಂದ ಶುಕ್ರಾಚಾರ್ಯರು ಮಂತ್ರೋಚ್ಚಾರವನ್ನು ಮಾಡಲಾಗಿ ಕಚ ಅವರ ಹೊಟ್ಟೆಯಲ್ಲಿ ಇರುವುದು ತಿಳಿಯಿತು. ದೇವಯಾನಿ ಹೇಗಾದರೂ ಕಚನನ್ನು ಬದುಕಿಸಿಕೊಡಲೇಬೇಕೆಂದು ಹಠಮಾಡಿದ್ದರಿಂದ ಹೊಟ್ಟೆಯೊಳಗಿದ್ದ ಕಚನಿಗೆ ಸಂಜೀವಿನಿ ಮಂತ್ರದ ಉಪದೇಶ ಮಾಡಿದರು. ಕಚ ಶುಕ್ರಾಚಾರ್ಯರ ಹೊಟ್ಟೆಯೊಳಗಿಂದ ಹೊರಬಂದು ಅದೇ ಮೃತಸಂಜೀವಿನಿ ವಿದ್ಯೆಯಿಂದ ಶುಕ್ರಾಚಾರ್ಯರನ್ನು ಬದುಕಿಸಿದ. ಅಸುರರು ಕಚನಿಗೆ ಮೃತ ಸಂಜೀವಿನಿ ವಿದ್ಯೆ ತಿಳಿಯಬಾರದೆಂದು ಎಷ್ಟೇ ಪ್ರಯತ್ನಪಟ್ಟರೂ ಅವರ ಕಾರ್ಯದಿಂದಲೇ ಶುಕ್ರಾಚಾರ್ಯರು ಕಚನಿಗೆ ಇದರ ಉಪದೇಶವನ್ನು ಮಾಡಬೇಕಾಯಿತು. ವಿದ್ಯಾಸಂಪನ್ನನಾದ ಕಚ ನಾನಿನ್ನು ಹೊರಡುವೆನು ಎಂದಾಗ ಗುರುಪುತ್ರಿ ದೇವಯಾನಿ ತನ್ನನ್ನು ಮದುವೆಯಾಗು ಎಂದು ಕೇಳಿದಳು. ಆಗ ಕಚ ಗುರು ಪುತ್ರಿಯಾದ ನೀನು ನನಗೆ ಪೂಜ್ಯಳು ಹಾಗಾಗಿ ನಿನ್ನನ್ನು ಮದುವೆಯಾಗಲಾರೆ ಎಂದ. ದೇವಯಾನಿ ಆಶಾಭಂಗದಿಂದ ಬೇರೆ ದಾರಿ ಕಾಣದೆ ನನ್ನ ತಂದೆಯಿಂದ ಕಲಿತ ವಿದ್ಯೆ ನಿನಗೆ ಫಲಿಸದಿರಲಿ ಎಂದು ಶಾಪವಿತ್ತಳು. ಕಚ ನನಗೆ ಫಲಿಸದಿದ್ದರೂ ನನ್ನಿಂದ ಉಪದೇಶವನ್ನು ಪಡೆದವರಿಗೆ ಫಲಿಸಿದರೆ ಸಾಕು ಎಂದ ಹಾಗೂ ಗುರು ಪುತ್ರಿಯಾದ ನೀನು ಧರ್ಮವಿರುದ್ಧವಾಗಿ ಮದುವೆಗೆ ಒತ್ತಾಯಿಸಿದ್ದರಿಂದ ಕ್ಷತ್ರಿಯನನ್ನು ಮದುವೆಯಾಗುವೆ ಎಂದು ನುಡಿದ. ನಂತರ ದೇವಯಾನಿ ಯಯಾತಿರಾಜನನ್ನು ಮದುವೆಯಾದಳು. ಈ ರೀತಿಯಾಗಿ ಕಚ ದುರ್ಲಭವಾದ ಮಂತ್ರವನ್ನು ಉಪಾಯದಿಂದ ಹಾಗೂ ಧೈರ್ಯದಿಂದ ಸಂಪಾದಿಸಿ ದೇವತೆಗಳ ಗೆಲುವಿಗೆ ಕಾರಣನಾದ.



ಕಾಮೆಂಟ್‌ಗಳು