ಶುನಶ್ಯೇಫ ಒಬ್ಬ ಋಷಿ. ಬಹ್ಲೀಕ ವಂಶದ ರುಚಿಕ ಮುನಿಯ ಮಧ್ಯಮ ಪುತ್ರ. ಶುನಶ್ಯೇಪನ ತಾಯಿ ಸತ್ಯವತಿ. ಶುನಶ್ಯೇಫ ಬಾಲಕನಾಗಿದ್ದಾಗ ಆತನ ಜೀವನದಲ್ಲಿ ಒಂದು ವಿಶಿಷ್ಟ ಘಟನೆ ನಡೆಯಿತು. ಸೂರ್ಯವಂಶದ ಅರಸು ಹರಿಶ್ಚಂದ್ರ ವರುಣನನ್ನು ಪ್ರಾರ್ಥಿಸಿ ತನಗೆ ಪುತ್ರ ಹುಟ್ಟಿದರೆ ಅವನನ್ನೇ ಪಶುವನ್ನಾಗಿಸಿ ಯಜ್ಞವನ್ನು ಮಾಡುತ್ತೇನೆ ಎಂದು ಬೇಡಿದ. ವರುಣನ ಕೃಪೆಯಿಂದ ರೋಹಿತ ಎಂಬ ಮಗನನ್ನು ಪಡೆದ. ನಂತರ ವರುಣ ಅಲ್ಲಿಗೆ ಬಂದು ನಿನಗೆ ಮಗ ಹುಟ್ಟಿದ್ದಾನೆ ಈಗ ಯಾಗವನ್ನು ಮಾಡು ಎಂದಾಗ ಹರಿಶ್ಚಂದ್ರ ಅವನಿಗೆ ಹಲ್ಲು ಹುಟ್ಟಲಿ, ಹಲ್ಲು ಬೀಳಲಿ ಎಂದು ಹೇಳುತ್ತಾ ಇಂದಾಗಲಿ, ನಾಳೆಯಾಗಲಿ ಎಂದೆಲ್ಲಾ ಹೇಳುತ್ತಾ ಕಾಲಹರಣ ಮಾಡುತ್ತಿದ್ದ. ಇಷ್ಟರಲ್ಲಿ ದೊಡ್ಡವನಾದ ರೋಹಿತ ತನ್ನನ್ನು ಯಜ್ಞಪಶುವನ್ನಾಗಿಸುತ್ತಾರೆ ಎಂದು ತಿಳಿದು, ಹೆದರಿ, ಧನುರ್ಧಾರಿಯಾಗಿ ಕಾಡನ್ನು ಸೇರಿದ. ನಂತರ ಇಂದ್ರನ ಸೂಚನೆಯಂತೆ ನಾಲ್ಕೈದು ವರ್ಷಗಳವರೆಗೆ ಅಲೆದಾಡಿದ. ನಂತರ ಋಚೀಕರ ಆಶ್ರಮವನ್ನು ತಲುಪಿ ಋಚೀಕ ಮುನಿಗೆ ವಿಪುಲ ಸಂಪತ್ತನ್ನು ಕೊಟ್ಟು ಆತನ ಮಗನಾದ ಶುನಶ್ಯೇಫ ಎಂಬುವವನನ್ನು ಕೊಂಡುಕೊಂಡು ಅವನನ್ನು ರಾಜ್ಯಕ್ಕೆ ಕರೆತಂದು, ತನಗೆ ಪ್ರತಿಯಾಗಿ ಈ ಬಾಲಕನನ್ನು ಪಶುವಾಗಿಸಿ ಯಜ್ಞ ಮಾಡಿ ಎಂದು ತನ್ನ ತಂದೆಗೆ ಹೇಳಿದ. ನಂತರ ಹರಿಶ್ಚಂದ್ರ ರೋಹಿತ ಕರೆತಂದ ಶುನಶ್ಯೇಫನನ್ನು ಯಜ್ಞಪಶುವಾಗಿಸಿ ನರಮೇಧ ಯಾಗವನ್ನು ಆರಂಭಿಸಿದ. ಆಗ ನರಬಲಿಯನ್ನು ಮಾಡುವ ಸಂದರ್ಭದಲ್ಲಿ ಯಾಗದ ಪಶುವಾಗಿದ್ದ ಶುನಶ್ಯೇಫ ವೇದಮಂತ್ರಗಳಿಂದ ದೇವತೆಗಳನ್ನು ಪ್ರಾರ್ಥಿಸಿದ. ದೇವತೆಗಳು ಬಂದು ಈತನನ್ನು ಬಿಡಿಸಿ ವಿಶ್ವಾಮಿತ್ರರಿಗೆ ಒಪ್ಪಿಸಿದರು. ದೇವತೆಗಳಿಂದ ಆತನು ವಿಶ್ವಾಮಿತ್ರರಿಗೆ ಒಪ್ಪಿಸಲ್ಪಟ್ಟ ಕಾರಣ ದೇವರಾತ ಎಂಬ ಹೆಸರು ಬಂತು. ನಂತರ ಆತ ತನ್ನ ತಂದೆ-ತಾಯಿಗಳ ಬಳಿ ಹೋಗಲೊಪ್ಪದೇ ವಿಶ್ವಾಮಿತ್ರರ ಬಳಿ ಉಳಿದು ಅವರ ಅಭಿಮಾನಪುತ್ರನೆನಿಸಿದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ