ಶ್ವೇತ ದ್ವೀಪದ ಬಳಿ ಇರುವ ಕಲಾಪ ಎಂಬ ಗ್ರಾಮದಲ್ಲಿ ಲೋಮಶ ಎಂಬ ಮಹರ್ಷಿಗಳು ತಪಸ್ಸನ್ನು ಮಾಡುತ್ತಿದ್ದರು. ಆಗ ಇಂದ್ರದ್ಯುಮ್ನ ಮಹಾರಾಜ ದೀರ್ಘಕಾಲ ದೇವಲೋಕದಲ್ಲಿ ಉಳಿದು, ಭೂಮಿಯಲ್ಲಿ ಆತನ ಕೀರ್ತಿ ಕಡಿಮೆ ಆಗಲು, ದೇವತೆಗಳು ಆತನನ್ನು ಭೂಮಿಗೆ ಕಳುಹಿಸಿದರು. ಆಗ ಇಂದ್ರದ್ಯುಮ್ನ ಮಹಾರಾಜ ಭೂಮಿಯಲ್ಲಿ ತನ್ನ ಪರಿಚಿತರು ಯಾರಾದರೂ ಇರುವರೇ ಎಂದು ವಿಚಾರಿಸುತ್ತ ಬರಲಾಗಿ ದೀರ್ಘಕಾಲ ಬದುಕಿದ್ದ ಒಬ್ಬೊಬ್ಬರನ್ನೇ ಭೇಟಿ ಯಾಗುತ್ತಾ ಲೋಮಶ ಮಹರ್ಷಿಗಳನ್ನು ಕೂಡ ಭೇಟಿಯಾದ. ಹಾಗೆ ಅವರ ಬಳಿ ಜ್ಞಾನ ಭಿಕ್ಷೆಯನ್ನು ಬೇಡಿದ ಇಂದ್ರದ್ಯುಮ್ನನ ಬಳಿ ಲೋಮಶ ಮುನಿಗಳು ತಮ್ಮ ವೃತ್ತಾಂತವನ್ನು ಹೇಳಿದರು. ಲೋಮಶಮಹರ್ಷಿಗಳು ಒಂದು ಪರ್ಣ ಶಾಲೆ ಯನ್ನೂ ಕೂಡ ನಿರ್ಮಿಸಿ ಕೊಂಡಿರಲಿಲ್ಲ ಎಡಗೈಯಲ್ಲಿ ಒಂದಿಷ್ಟು ಹುಲ್ಲಿನ ಜೊಂಡುಗಳನ್ನು ಹಿಡಿದು ಸೂರ್ಯನಿಗೆ ಮರೆಮಾಚಿ ತಪಸ್ಸನ್ನು ಮಾಡುತ್ತಿದ್ದರು. ಇಂದ್ರದ್ಯುಮ್ನ ಮಹಾರಾಜ ಕೇಳಿದ - ತಾವು ದೀರ್ಘಕಾಲದಿಂದ ಜೀವಿಸುತ್ತಿದ್ದರೂ ಕೂಡ ಪರ್ಣಶಾಲೆಯನ್ನು ಏಕೆ ನಿರ್ಮಿಸಿಕೊಂಡಿಲ್ಲಎಂದು. ಆಗ ಲೋಮಶ ಮಹರ್ಷಿಗಳು ಜೀವನ ನಶ್ವರವಾದದ್ದು. ಇಂತಹ ನಶ್ವರವಾದ ಜೀವನಕ್ಕೆ ಪರ್ಣಶಾಲೆಯನ್ನು ಏಕೆ ನಿರ್ಮಿಸಿಕೊಳ್ಳಬೇಕು? ಎಂದರು. ಆಗ ಇಂದ್ರದ್ಯುಮ್ನ ಮಹಾರಾಜ ತಮ್ಮ ಆಯಸ್ಸು ಎಷ್ಟು ಹಾಗೂ ತಮ್ಮ ದೀರ್ಘಾಯಸ್ಸಿನ ರಹಸ್ಯವೇನು ಎಂದು ಕೇಳಿದ. ಆಗ ಲೋಮಶ ಮಹರ್ಷಿಗಳು ಅವರ ವೃತ್ತಾಂತವನ್ನು ಹೇಳಿದರು. ನಾನು ಹಿಂದಿನ ಜನ್ಮದಲ್ಲಿ ನಿರ್ಗತಿಕ ನಾಗಿದ್ದೆ. ಒಂದು ದಿನ ಹಸಿವು ನೀರಡಿಕೆ ಗಳಿಂದ ಬಳಲಿ ಬೆಂಡಾಗಿ ಒಂದು ಸರೋವರದ ಸಮೀಪ ಬಂದೆ. ಆ ಸರೋವರದಲ್ಲಿ ನೀರನ್ನು ಕುಡಿದು ಅಲ್ಲಿರುವಂತಹ ಕಮಲದ ನಾಳಗಳನ್ನು ತಿಂದು ಹಸಿವನ್ನು ನೀಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತ ಕೆಲವು ಕಮಲದ ಹೂವುಗಳನ್ನು ಹತ್ತಿರದಲ್ಲಿ ಇದ್ದಂತಹ ಶಿವಲಿಂಗದ ಮೇಲೆಯೂ ಹಾಕಿ ಪೂಜೆಯನ್ನು ಮಾಡಿದೆ. ಹಾಗೆಯೇ ಹಸಿವಿನಿಂದ ಕಂಗೆಟ್ಟು ದಾರಿಯಲ್ಲಿಯೇ ಬಿದ್ದು ಮರಣವನ್ನು ಹೊಂದಿದೆ. ಮರುಜನ್ಮದಲ್ಲಿ ಒಬ್ಬ ತಪಸ್ವಿಯ ಮನೆಯಲ್ಲಿ ಹುಟ್ಟಿದೆ. ಹಳೆಯ ಜನ್ಮದ ಸ್ಮರಣೆಯನ್ನು ಹೊಂದಿದ್ದೆ ಆದ್ದರಿಂದ ಯಾರೊಂದಿಗೂ ಕೂಡ ನಾನು ಮಾತನಾಡುತ್ತಿರಲಿಲ್ಲ. ಎಲ್ಲರೂ ನನ್ನನ್ನು ಎಂದು ಹಾಸ್ಯ ಮಾಡುತ್ತಿರುವಾಗ ಇದರಿಂದ ಬೇಸತ್ತ ನಾನು ಶಿವನ ದೇವಾಲಯವನ್ನು ಸೇರಿದೆ. ಅಷ್ಟರಲ್ಲಿ ನನ್ನ ತಂದೆಯು ಕೂಡ ಮೃತರಾದರು. ನನ್ನ ಬಂಧುಗಳು ನನ್ನನ್ನು ತಿರಸ್ಕರಿಸಿದರು. ಹಾಗಾಗಿ ಶಿವನ ದೇವಸ್ಥಾನವೇ ನನ್ನ ವಾಸಸ್ಥಳವಾಯಿತು. ನನ್ನ ನಿರಂತರ ಪೂಜೆಯಿಂದ ಪ್ರೀತಿಯನ್ನು ಹೊಂದಿದಂತಹ ಶಿವ ನನ್ನಲ್ಲಿ ವರವನ್ನು ನೀಡುವೆನು ಕೇಳು ಎಂದಾಗ, ನಾನು ಅಜರಾಮರ ನಾಗಲಿ ಎಂಬ ವರವನ್ನು ಕೇಳಿದೆ. ಆಗ ಶಿವ ಇದು ಸಾಧ್ಯವಿಲ್ಲ ಅಜರಾಮರತ್ವವನ್ನು ಬಿಟ್ಟು ಯಾವುದಾದರೂ ಒಂದು ಪರಿಮಿತಿಯ ಆಯುಷ್ಯವನ್ನು ಕೇಳು ಎಂದು ಹೇಳಿದಾಗ, ನಾನು ಚತುರ್ಮುಖಬ್ರಹ್ಮನ ಒಂದು ದಿನಕ್ಕೆ ನನ್ನ ಮೈಮೇಲಿನ ಒಂದು ರೋಮ ಉದುರಲಿ. ಹಾಗೆ ನನ್ನ ಮೈಮೇಲಿನ ಎಲ್ಲರೂ ರೋಮಗಳು ಉದುರಿದಾಗ ನನಗೆ ಸಾವು ಬರಲಿ ಎಂದು ಕೇಳಿದೆ. ಶಿವ ಇದಕ್ಕೆ ತಥಾಸ್ತು ಅಂತ ಹೇಳಿದ. ಈಗ ನನ್ನ ಮೈಮೇಲಿನ ಎರಡು ಅಂಗುಲಗಳಷ್ಟು ಕೂದಲು ಉದುರಿ ಹೋಗಿವೆ. ರೋಮಗಳೆಲ್ಲ ಉದುರಿದ ಮೇಲೆ ನಾನು ಸಾಯಲೇಬೇಕು. ಇಂತಹ ನಶ್ವರವಾದ ಶರೀರಕ್ಕೆ ಪರ್ಣಶಾಲೆ ಏಕೆ ಬೇಕು? ಎಂದು ಲೋಮಶ ಮಹರ್ಷಿಗಳು ಕೇಳಿದರು. ಹೀಗೆ ಲೋಮಶ ಮಹರ್ಷಿಗಳು ಇಂದ್ರದ್ಯುಮ್ನ ಮಹಾರಾಜನಿಗೆ ಜೀವನದ ನಶ್ವರತೆಯ ಬಗ್ಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ