ಪ್ರಾವಾರಕರ್ಣ ಎಂಬುವನು ಗೂಬೆಗಳ ರಾಜ. ಹಿಂದೆ ಕಾಶಿ ಕ್ಷೇತ್ರದಲ್ಲಿ ವಸಿಷ್ಠ ಕುಲದಲ್ಲಿ ಹುಟ್ಟಿದ ಘಂಟ ಎಂಬ ಹೆಸರಿನ ಶಿವಭಕ್ತನಿದ್ದ. ಈತ ನಿರಂತರವಾಗಿ ಶಿವನನ್ನು ಪೂಜಿಸುತ್ತಿದ್ದ. ಈತನ ಪೂಜೆಗೆ ಮೆಚ್ಚಿ ಶಿವ ಈತನಿಗೆ ದೀರ್ಘ ಆಯುಷ್ಯವನ್ನು ಕರುಣಿಸಿದ. ಅದೇ ಕಾಶಿ ಕ್ಷೇತ್ರದಲ್ಲಿ ಭೃಗುವಂಶದ ಮಹಾತಪಸ್ವಿಯಾದ ದೇವಲ ಎಂಬ ಮುನಿಯ ಪುತ್ರಿಯಾದ ಸುದರ್ಶನೆ ಎಂಬುವವಳನ್ನು ಭಾರ್ಗವ ಎಂಬ ಮುನಿ ಮದುವೆಯಾದ. ಸೌಂದರ್ಯವತಿಯಾದ ಪುತ್ರಿಯನ್ನು ಪಡೆದು, ಅವಳಿಗೂ ಕೂಡ ಸುದರ್ಶನೆ ಎಂಬ ಹೆಸರನ್ನು ಇಟ್ಟ. ಅವಳರೂಪವನ್ನು ನೋಡಿ ಮನಸೋತ ಘಂಟ ಭಾರ್ಗವ ಮುನಿಗಳ ಬಳಿ ಬಂದು ತನಗೆ ಆಕೆಯನ್ನು ಕೊಟ್ಟು ಮದುವೆ ಮಾಡಿ ಎಂದು ಬೇಡಿದ, ಹಾಗೂ ಭಾರ್ಗವ ಮನಿ ಒಪ್ಪಿದ ಕೂಡ. ಘಂಟನ ರೂಪ ಹಾಗೂ ಆತನ ನಡವಳಿಕೆ ತಾಯಿ ಮತ್ತು ಮಗಳಿಗೆ ಇಷ್ಟವಾಗಿರಲಿಲ್ಲ. ಘಂಟನಿಗಿಂತ ಸುಂದರವಾದ ಮತ್ತೊಬ್ಬ ವರನಿಗೆ ಸುದರ್ಶನೆಯನ್ನು ಕೊಟ್ಟು ಮದುವೆ ಮಾಡುವುದು ಎಂದು ತೀರ್ಮಾನವಾಯಿತು. ಆಗ ಘಂಟನ ಮಿತ್ರರಲ್ಲ ಘಂಟನನ್ನು ಪರಿಹಾಸ ಮಾಡತೊಡಗಿದರು. ಇದನ್ನು ಸಹಿಸದ ಘಂಟ ಮದುವೆಯ ಹಿಂದಿನ ದಿನ ರಾತ್ರಿ ವಧುವನ್ನು ಅಪಹರಿಸಿದ. ಮರುದಿನ ಬೆಳಗಾದಾಗ ಭಾರ್ಗವ ಘಂಟನನ್ನು ಹಿಡಿದುತಂದು, ರಾತ್ರಿ ಕಾಲದಲ್ಲಿ ಗೂಬೆ ನಡೆದುಕೊಳ್ಳುವಂತೆ ನೀನು ನನ್ನ ಮಗಳನ್ನು ಅಪಹರಿಸಿದೆ. ಆದ್ದರಿಂದ ನೀನು ಗೂಬೆಯಾಗು ಎಂದು ಶಾಪವಿತ್ತನು. ಈ ಶಾಪದಿಂದ ಎಚ್ಚೆತ್ತ ಘಂಟ ಭಾರ್ಗವ ಮುನಿಗಳನ್ನು ಪ್ರಾರ್ಥಿಸಿ ಒಲಿಸಿದಾಗ ಅವರು ಇಂದ್ರದ್ಯುಮ್ನ ಮಹಾರಾಜನನ್ನು ಭೇಟಿಯಾದಾಗ ಶಾಪವಿಮೋಚನೆ ಆಗುವುದು ಎಂದರು. ಆನಂತರ ಪ್ರಾವಾರಕರ್ಣ ಎಂಬ ಹೆಸರಿನ ಗೂಬೆಯಾಗಿ ಇಪ್ಪತ್ತೆಂಟು ಕಲ್ಪಗಳನ್ನು ಕಳೆದ ನಂತರ ಇಂದ್ರದ್ಯುಮ್ನ ಮಹಾರಾಜನ ಭೇಟಿಯಾದಾಗ ತನ್ನ ಶಾಪ ವಿಮೋಚನೆಯನ್ನು ಹೊಂದಿದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ