ಹಿಂದೆ ಶಾಂಡಿಲ್ಯ ಎಂಬ ಒಬ್ಬ ಬ್ರಾಹ್ಮಣ ತನ್ನ ಬಾಲ್ಯದಲ್ಲಿ ಮಳೆಗಾಲದ ಮೃದುವಾದ ಮಣ್ಣನ್ನು ತಂದು ತನ್ನ ಗೆಳೆಯರ ಜೊತೆಗೂಡಿ ಚಿಕ್ಕದಾದ ಶಿವ ಮಂದಿರಗಳನ್ನು ನಿರ್ಮಿಸುತ್ತಿದ್ದ. ಇದನ್ನು ಕಾಡು ಹೂವುಗಳಿಂದಲೇ ಪೂಜಿಸುತ್ತಾ ಆನಂದ ಪಡುತ್ತಿದ್ದ ಪುಣ್ಯದಿಂದ ಮುಂದಿನ ಜನ್ಮದಲ್ಲಿ ವಿದಿಷಾ ಎಂಬ ನಗರದಲ್ಲಿ ಹುಟ್ಟಿದ. ಅಲ್ಲಿ ಹಿಂದಿನ ಜನ್ಮದ ಸ್ಮರಣೆಯನ್ನು ಪಡೆದು ಶ್ರದ್ಧಾಭಕ್ತಿಗಳಿಂದ ಶಿವ ಪಂಚಾಯತನ ವನ್ನು ನಿರ್ಮಿಸಿ ಪ್ರತಿಷ್ಠೆ ಮಾಡಿ ಪುಣ್ಯ ಸಂಪಾದನೆಯನ್ನು ಮಾಡಿದ. ಈತ ತನ್ನ ಮೂರನೆಯ ಜನ್ಮದಲ್ಲಿ ಪ್ರತಿಷ್ಠಾನ ಪುರ ಎಂಬಲ್ಲಿ ಹುಟ್ಟಿದ. ಜಯದತ್ತ ಎಂಬ ಹೆಸರು ಪಡೆದು ಅಲ್ಲಿ ಚಕ್ರವರ್ತಿ ಆದನು. ಈತ ಶಿವನನ್ನೇ ನಿರಂತರ ಪೂಜಿಸಿ ಶಿವನ ಅನುಗ್ರಹದಿಂದ ಅಜರಾಮರತ್ವವನ್ನು ಪಡೆದ. ಆನಂತರ ಅನೇಕ ಪತಿವ್ರತಾ ಸ್ತ್ರೀಯರಿಗೆ ತೊಂದರೆಯನ್ನು ಕೊಡುವುದಕ್ಕೆ ಪ್ರಾರಂಭಿಸಿದ. ಈತನ ಉಪಟಳದಿಂದ ಬೇಸತ್ತ ಯಮ ಶಿವನಲ್ಲಿ ಮೊರೆಯಿಟ್ಟ. ಶಿವ ಇವನನ್ನು ಕರೆದು ನೀನು ಧರ್ಮ ಮಾರ್ಗಕ್ಕೆ ವಿರುದ್ಧವಾಗಿ ನಡೆದಿರುವುದರಿಂದ ಈ ನಿಮಿಷದಲ್ಲಿಯೇ ಆಮೆಯಾಗು ಎಂದು ಶಾಪವಿತ್ತ. ನಂತರ ಜಯದತ್ತ ಪರಿಪರಿಯಾಗಿ ಬೇಡಿಕೊಳ್ಳಲು ಶಿವ ಪ್ರಸನ್ನನಾಗಿ, ಇಂದ್ರದ್ಯುಮ್ನ ಮಹಾರಾಜನ ಮಾಸಿಹೋದ ಕೀರ್ತಿಯನ್ನು ನೀನು ಪುನಃ ಕೊಂಡಾಡಿದಾಗ ನಿನ್ನ ಶಾಪ ವಿಮೋಚನೆಯಾಗಿ ನನ್ನಲ್ಲಿ ಬಂದು ಸೇರುವೆ ಎಂದು ಅನುಗ್ರಹಿಸಿದ. ಈ ಜಯದತ್ತನು ಮಂದರಕ ಎಂಬ ಆಮೆಯಾಗಿ ಜನಿಸಿದ. ಈತ ಅಕೂಪಾರ ಎಂಬ ಇನ್ನೊಂದು ಹೆಸರನ್ನು ಕೂಡ ಹೊಂದಿ ಇಂದ್ರದ್ಯುಮ್ನ ಎಂಬ ಸರೋವರದಲ್ಲಿ ವಾಸವಾಗಿದ್ದ. ಇಂದ್ರದ್ಯುಮ್ನ ಮಹಾರಾಜ ದೀರ್ಘಕಾಲ ದೇವಲೋಕದಲ್ಲಿ ಉಳಿದು ಭೂಲೋಕದಲ್ಲಿ ಆತನ ಕೀರ್ತಿ ಕಡಿಮೆಯಾಗಲು ದೇವತೆಗಳು ಅವನನ್ನು ಭೂಮಿಗೆ ಕಳುಹಿಸಿದರು. ಆಗ ಇಂದ್ರದ್ಯುಮ್ನ ಮಹಾರಾಜ ಭೂಮಿಯಲ್ಲಿ ತನ್ನ ಪರಿಚಿತರು ಯಾರಾದರೂ ಇರುವರೇ ಎಂದು ವಿಚಾರಿಸುತ್ತಾ ಬರಲಾಗಿ ಅಕೂ್ಪಾರ ಆಮೆ ಇಂದ್ರದ್ಯುಮ್ನನ ಕೀರ್ತಿಯನ್ನು ಹೊಗಳಿದ್ರಿಂದ ಇಂದ್ರದ್ಯುಮ್ನ ಪುನಃ ದೇವತೆಗಳ ಲೋಕವನ್ನು ಸೇರಿದ ಹಾಗೂ ಅಕೂಪಾರ ಶಾಪ ವಿಮೋಚನೆಯಾಗಿ ಶಿವಲೋಕವನ್ನು ಸೇರಿದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ