ಮಾಂಡೂಕಿ ಮುನಿಯ ಹಿರಿಯ ಪತ್ನಿ ಇತರೆ ಎಂಬ ಹೆಸರಿನವಳು. ಇವಳ ಮಗ ಐತರೇಯ. ಈತ ಪೂರ್ವಜನ್ಮ ಸಂಸ್ಕಾರದಿಂದ ನಿರಂತರ ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರಿ ಮಂತ್ರದ ಜಪವನ್ನು ಮಾಡುತ್ತಾ ಅನುಗಾಲವೂ ಶ್ರೀಮನ್ನಾರಾಯಣನ ಸ್ಮರಣೆಯಲ್ಲೇ ಕಾಲಕಳೆಯುತ್ತಿದ್ದ. ಲೌಕಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ. ತಂದೆತಾಯಿಗಳು ಬಂಧುಗಳೆಲ್ಲರೂ ಇವನನ್ನು ದಡ್ಡನೆಂದು ತಿಳಿದಿದ್ದರು. ಇದರಿಂದ ಮಾಂಡೂಕಿ ಬೇಸತ್ತು ಪಿಂಗೆ ಎಂಬುವವಳನ್ನು ಮದುವೆಯಾಗಿ ನಾಲ್ವರು ಮಕ್ಕಳನ್ನು ಪಡೆದ. ಆ ನಾಲ್ವರು ಮಕ್ಕಳೂ ಬೆಳೆದು ವಿದ್ಯಾವಂತರಾಗಿ ತಂದೆಯಂತೆಯೇ ಯಜ್ಞಯಾಗಾದಿಗಳನ್ನು ನೆರವೇರಿಸುತ್ತಾ ತಂದೆ-ತಾಯಿಗಳಿಗೆ ಸಂತೋಷವನ್ನು ಉಂಟುಮಾಡಿದರು. ಐತರೇಯನ ತಾಯಿಗೆ ತನ್ನ ಮಗನನ್ನು ಎಲ್ಲರೂ ದಡ್ಡನೆಂದು ತಿರಸ್ಕರಿಸಿದ್ದು ಬೇಸರವನ್ನುಂಟು ಮಾಡಿತ್ತು. ಒಮ್ಮೆ ಹೀಗೆ ತನ್ನ ಮಗ ಐತರೇಯನ ಬಳಿ ದುಃಖವನ್ನು ಹೇಳಿಕೊಳ್ಳಲು ಐತರೇಯ ತಾಯಿಗೆ ಮನಮುಟ್ಟುವಂತೆ ತತ್ತ್ವೋಪದೇಶವನ್ನು ಮಾಡಿದ. ತಾಯಿ ಮಗನ ಪಾಂಡಿತ್ಯವನ್ನು ತಿಳಿದು ಆಶ್ಚರ್ಯಚಕತಳಾದಳು. ತನ್ನ ಮಗ ಪ್ರಸಿದ್ಧನಾಗುವ ದಾರಿ ಯಾವುದು ಎಂದು ಚಿಂತಿಸುತ್ತಿದ್ದಳು. ಹೀಗಿರಲಾಗಿ ಒಂದುದಿನ ರಾತ್ರಿ ವಾಸುದೇವ ಮೂರ್ತಿ ಐತರೆಯನ ಕನಸಿನಲ್ಲಿ ಬಂದು ನೀನು ಜೀವನ್ಮುಕ್ತ ನಾಗಿರುವೆ. ಆದರೆ ನಿನ್ನ ತಾಯಿಯ ಇಷ್ಟದಂತೆ ನೀನು ವಿಧಿಯುಕ್ತವಾಗಿ ಮದುವೆಯಾಗಿ ಯಜ್ಞಯಾಗಾದಿಗಳನ್ನು ನೆರವೇರಿಸಿ, ಅದರ ಫಲವನ್ನು ನನಗೆ ಅರ್ಪಿಸು. ನಿನಗೆ ಗುರೂಪದೇಶ ಇಲ್ಲದೆಯೇ ಸಕಲ ವೇದ ವೇದಾಂಗಗಳು ಹೊಳೆಯುತ್ತವೆ. ಹಾಗೆಯೇ ಕೋಟಿತೀರ್ಥದ ಬಳಿ ಯಜ್ಞ ಮಾಡುತ್ತಿರುವ ಹರಿಮೇಧ ಎಂಬ ಪಂಡಿತನ ಬಳಿ ತೆರಳಿ ನಿನ್ನ ಬುದ್ಧಿಶಕ್ತಿಯಿಂದ ಗೌರವವನ್ನು ಪಡೆ ಹಾಗೂ ನಿನ್ನ ತಂದೆತಾಯಿಗಳನ್ನು ಸಂತೋಷಪಡಿಸು ಎಂದನು. ಮರುದಿನ ಐತರೇಯ ತನ್ನ ಕನಸಿನ ವೃತ್ತಾಂತವನ್ನು ತಾಯಿಗೆ ತಿಳಿಸಿ, ಹರಿಮೇಧನ ಯಜ್ಞಶಾಲೆಗೆ ತೆರಳಿ, ಅಲ್ಲಿ ತನ್ನ ವೇದಾರ್ಥ ಪಾಂಡಿತ್ಯವನ್ನು ತೋರಿದ. ಅಲ್ಲಿ ಅಪಾರ ದ್ರವ್ಯದಕ್ಷಿಣೆಗಳನ್ನು ಪಡೆದು, ಹರಿಮೇಧನ ಮಗಳನ್ನೇ ಮದುವೆಯಾದ. ಅನೇಕ ಯಜ್ಞಯಾಗಾದಿಗಳನ್ನು ಮಾಡಿದ. ಈತನ ಹೆಸರಿನಿಂದಲೇ ಐತರೇಯೋಪನಿಷತ್ ಎಂಬುದು ಪ್ರಸಿದ್ಧವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ