21 ಅರುಣನ ಕಥೆ Arunana Kathe

ಕಶ್ಯಪ ಮಹರ್ಷಿಗಳಿಗೆ ಹದಿಮೂರು ಜನ ಹೆಂಡತಿಯರು. ಎಲ್ಲರೂ ಅಕ್ಕ-ತಂಗಿಯರು. ಅವರಲ್ಲಿ ವಿನತೆ ಹಾಗೂ ಕದ್ರು ಎಂಬ ಇಬ್ಬರು ಇದ್ದರು. ಕದ್ರುವಿನ ಮಕ್ಕಳು ನಾಗಗಳು, ವಿನತೆ ಪಕ್ಷಿಗಳ ತಾಯಿ. ಇವರಿಬ್ಬರೂ ತಮ್ಮ ಸೌಂದರ್ಯದ ವಿಷಯದಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದರು. ವಿನತೆಯ ಗರ್ಭದಲ್ಲಿ ಅರುಣ ಇದ್ದಾಗ ಅನೇಕ ವರ್ಷಗಳೇ ಕಳೆದರೂ ಮಗು ಜನಿಸದೇ ಇರುವುದರಿಂದ ಹಾಗೂ ಕದ್ರುವಿಗೆ ಇವಳಿಗಿಂತ ಮೊದಲೇ ಮಕ್ಕಳು ಜನಿಸಿದ್ದರಿಂದ ಅಸೂಯೆಯಿಂದಲೂ, ಕುತೂಹಲದಿಂದಲೂ ಹೊಟ್ಟೆಯನ್ನು ಹಿಸುಕಿಕೊಂಡಳು. ಇದರಿಂದ ಎಲ್ಲಾ ಅಂಗಗಳೂ ಸರಿಯಾಗಿ ಬೆಳೆಯದೇ ಇರುವ ಶಿಶುವಿನ ಜನನವಾಯಿತು. ಆ ಮಗುವಿನ ತೊಡೆ ಮೊದಲಾದ ದೇಹದ ಕೆಳಗಿನ ಅಂಗಗಳು ಬೆಳೆದಿರಲಿಲ್ಲ. ಈ ಕಾರಣದಿಂದ ಇವನಿಗೆ ಅನೂರು ಎಂಬ ಹೆಸರು ಬಂತು. ತನ್ನನ್ನು ಪೂರ್ಣ ಬೆಳೆಯಲು ಕೊಡದೇ ಹೆತ್ತಿದ್ದಕ್ಕಾಗಿ ಮಗುವು ಸಿಟ್ಟಿನಿಂದ ತನ್ನ ತಾಯಿಯನ್ನುಈ ರೀತಿಯಾಗಿ ಶಪಿಸಿತು. ನಿನ್ನ ಈ ಅಪರಾಧಕ್ಕಾಗಿ ಸವತಿಯ ದಾಸ್ಯವನ್ನು ಅನುಭವಿಸುವ ಕರ್ಮ ನಿನ್ನದಾಗಿದೆ. ಎರಡನೆಯ ಗರ್ಭ ವನ್ನಾದರೂ ಈ ರೀತಿ ಹಾಳು ಮಾಡಬೇಡ. ಅದರಿಂದ ಮಹಾಪ್ರತಾಪ ಶಾಲಿಯಾದ ಮಗು ಹುಟ್ಟಿ ನಿನ್ನನ್ನು ದಾಸ್ಯದಿಂದ ಬಿಡಿಸುತ್ತಾನೆ ಎಂದಿತು.  ಈ ವಿನತೆಯ ಮೊದಲ ಮಗನೇ ಸಾಮರ್ಥ್ಯ ಶಾಲಿಯಾದ ಪುತ್ರನೇ ಅರುಣ. ಈತ ಸೂರ್ಯನ ಸಾರಥಿ. ಈತ ಶ್ಯೇನಿ ಎಂಬುವವಳನ್ನು ಮದುವೆಯಾಗಿ ಸಂಪಾತಿ ಹಾಗೂ ಜಟಾಯು ಎಂಬ ಇಬ್ಬರು ಮಕ್ಕಳನ್ನು ಪಡೆದ.


ಕಾಮೆಂಟ್‌ಗಳು