20 ಗರುಡನ ಜನನದ ಕಥೆ Garudana Janana

ಒಮ್ಮೆ ಕಶ್ಯಪ ಮಹರ್ಷಿಗಳು ಒಳ್ಳೆಯ ಸಂತಾನವಾಗಲಿ ಎಂಬ ಅಪೇಕ್ಷೆಯಿಂದ ಯಾಗವನ್ನು ಆರಂಭಿಸಿದರು. ಅವರಿಗೆ ಸಹಾಯ ಮಾಡಲು ದೇವತೆಗಳು, ಋಷಿಗಳು,  ಗಂಧರ್ವರು ಎಲ್ಲರೂ ಬಂದರು, ಕಶ್ಯಪರು  ಇಂದ್ರನನ್ನು ವಾಲಖಿಲ್ಯ ಮುನಿಗಳನ್ನು ಸಮಿತ್ತು ತರಲು ಕಳುಹಿಸಿದರು. ಶಕ್ತಿಶಾಲಿಯಾದ ಇಂದ್ರ ಸಮಿತ್ತಿನ ರಾಶಿಯನ್ನು ಕಟ್ಟಿ ಹೊರೆ ಮಾಡಿ ಆಯಾಸವಿಲ್ಲದೆ ಹೊತ್ತುಕೊಂಡು ಬರುತ್ತಿದ್ದ. ಅವನು ಬರುತ್ತಿದ್ದ ದಾರಿಯಲ್ಲಿ ವಾಲಖಿಲ್ಯರು ಒಂದು ಸಣ್ಣ ಮುತ್ತುಗದ ಗಿಡದ ತುದಿಯನ್ನು ತರಲು ಹೊರಟು ಭಾರವನ್ನು ತಾಳಲಾರದೇ ಕಷ್ಟಪಡುತ್ತಿದ್ದರು. ದಾರಿಯಲ್ಲಿ ಹಸುವಿನ ಹೆಜ್ಜೆಯಿಂದ ಉಂಟಾದ ಹಳ್ಳದಲ್ಲಿ ನೀರು ನಿಂತಿತ್ತು. ಇದನ್ನು ದಾಟಲಾಗದೇ ಕಷ್ಟಪಡುತ್ತಿದ್ದ ವಾಲಖಿಲ್ಯರನ್ನು ಇಂದ್ರನು ಪರಿಹಾಸ ಮಾಡಿದನು. ವಾಲಖಿಲ್ಯರಿಗೆ ಅವಮಾನವಾಯಿತು. ಅವರೆಲ್ಲರೂ  ಹೊಸ ಇಂದ್ರನನ್ನು ಸೃಷ್ಟಿಸಲು ನಿರ್ಧರಿಸಿ ಯಾಗವನ್ನು ಆರಂಭಿಸಿದರು. ವಾಲಖಿಲ್ಯರ ತಪೋ ಬಲವನ್ನು ತಿಳಿದ ಇಂದ್ರ ಇದರಿಂದ ಹೆದರಿದನು, ಹಾಗೆಯೇ ತನ್ನನ್ನು ರಕ್ಷಿಸುವಂತೆ ಕಶ್ಯಪರಲ್ಲಿ ಶರಣಾದನು. ಕಶ್ಯಪರು ವಾಲಖಿಲ್ಯರನ್ನು ಸಮಾಧಾನಪಡಿಸಿ ಬ್ರಹ್ಮನ ಸಂಕಲ್ಪದಿಂದ ಇಂದ್ರನ ಸೃಷ್ಟಿಯಾಗಿದೆ. ಹಾಗಾಗಿ ನೀವು ಮತ್ತೊಂದು ಇಂದ್ರನನ್ನು ಸೃಷ್ಟಿಸಿದರೆ ಬ್ರಹ್ಮನ ಮಾತು ಸುಳ್ಳಾದೀತು. ಆದ್ದರಿಂದ ಇಂದ್ರನ ತಪ್ಪನ್ನು ಮನ್ನಿಸಿ ಅವನನ್ನು ಅನುಗ್ರಹಿಸಿ ಎಂದರು. ಆಗ ವಾಲಕಿಲ್ಯ ರು ಕಶ್ಯಪರನ್ನು ಗೌರವಿಸಿ ಮತ್ತೊಬ್ಬ ಇಂದ್ರನ ಸೃಷ್ಟಿಗಿಂತಲೂ ನಿಮ್ಮ ಸಂತಾನವು ಇಂದ್ರನಿಗೆ ಸಮ ವಾಗಬೇಕು ಎಂಬುದು ನಮ್ಮ ಇಚ್ಛೆ. ಹಾಗಾಗಿ ಈ ಹೋಮದ ಫಲವನ್ನು ನಿಮಗೆ ಅರ್ಪಿಸುವೆವು. ನೀವು ತಿಳಿದಂತೆ ಮಾಡಿ ಎಂದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಪತ್ನಿ ವಿನತೆಯನ್ನು ಕಶ್ಯಪರು ಅನುಗ್ರಹಿಸಿ ಇಬ್ಬರು ಶಕ್ತಿಶಾಲಿ ಪುತ್ರರು ನಿನ್ನಲ್ಲಿ ಜನಿಸುವರು. ಅವರು ವಾಲಖಿಲ್ಯರ ತಪೋಬಲದಿಂದ ಲೋಕಗಳಿಗೆಲ್ಲ ಪ್ರಭುವಾಗುವ ಸಾಮರ್ಥ್ಯವುಳ್ಳವರು ಆಗುವರು ಹಾಗೂ ಒಬ್ಬನು ಸೂರ್ಯನ ಸಾರಥಿ ಆದರೆ ಮತ್ತೊಬ್ಬ ಇಂದ್ರನಿಗೆ ಸಮನಾಗಿ ಬೆಳೆಯುವನು ಎಂದರು ಹಾಗೂ ಇಂದ್ರನನ್ನು ಕುರಿತು ಹುಟ್ಟುವ ಮಕ್ಕಳು ನಿನಗೆ ತಮ್ಮಂದಿರಂತೆ ನಡೆಯುವರು ನಿನ್ನಲ್ಲಿ ಸ್ನೇಹ ಭಾವವನ್ನು ಹೊಂದಿರುತ್ತಾರೆ ಎಂದು ಹಾಗೂ ನೀನು ಯಾವ ಸಜ್ಜನರನ್ನೂ ಅಪಮಾನ ಮಾಡಬಾರದು. ಸತ್ಪುರುಷರ ನಾಲಿಗೆ ವಜ್ರಾಯುಧಕ್ಕಿಂತಲೂ ಶಕ್ತಿಶಾಲಿಯಾದುದು ಎಂದು ಹೇಳಿ ಇಂದ್ರನನ್ನು ಸ್ವರ್ಗಕ್ಕೆ ಕಳುಹಿಸಿದರು. ಹೀಗೆ ಕಶ್ಯಪ  ಮುನಿಗಳಿಂದ  ವಿನತೆಗೆ ಇಬ್ಬರು ಗಂಡು ಮಕ್ಕಳು ಜನಿಸಿದರು.  ಮೊದಲನೆಯವನು ಸೂರ್ಯನ ಸಾರಥಿ ಅರುಣ ಎರಡನೆಯವನು ಪಕ್ಷಿರಾಜ ಗರುಡ.



ಕಾಮೆಂಟ್‌ಗಳು