ಕಶ್ಯಪ ಮುನಿಗಳ ಪತ್ನಿಯಾದ ಪ್ರಾಥೆ ಎಂಬುವಳಲ್ಲಿ ಜನಿಸಿದ ವಿಶ್ವಾವಸು ಎಂಬ ದೇವಗಂಧರ್ವ ಒಮ್ಮೆ ಭೂಮಿಯಲ್ಲಿ ಸಂಚರಿಸುತ್ತಿದ್ದಾಗ ಸ್ಥೂಲಶಿರ ಎಂಬ ಮುನಿಯನ್ನು ಅಪಮಾನ ಮಾಡಿದ. ಆಗ ಕುಪಿತನಾದ ಮುನಿ ಈತನನ್ನು ರಾಕ್ಷಸನಾಗು ಎಂದು ಶಪಿಸಿದ. ಹೀಗೆ ಈತ ಕಬಂಧ ಎಂಬ ರಾಕ್ಷಸನಾದ. ಈತ ಒಮ್ಮೆ ಇಂದ್ರನನ್ನು ಎದುರಿಸಿದಾಗ ಇಂದ್ರನು ವಜ್ರಾಯುಧದಿಂದ ಇವನ ತಲೆಯ ಮೇಲೆ ಪ್ರಹಾರ ಮಾಡಿದ. ಆಗ ಇವನ ಮುಖ ಹೊಟ್ಟೆಯೊಳಗೆ ಸೇರಿಕೊಂಡಿತು. ಆಗ ದೇವತೆಗಳ ಪ್ರಾರ್ಥನೆಯಂತೆ ಇಂದ್ರ ಈತನಿಗೆ ಇವನ ತೋಳುಗಳು ಯೋಜನದಷ್ಟು ಉದ್ದವಾಗುವಂತೆಯೂ ತೋಳುಗಳ ನಡುವೆ ಸಿಕ್ಕಿದವರನ್ನು ಬಾಚಿ ತಿಂದು ಬದುಕಿರುವಂತೆಯೂ ವರವನ್ನು ನೀಡಿದ. ಕಬಂಧ ದಂಡಕಾರಣ್ಯದಲ್ಲಿ ವಾಸಿಸುತ್ತಾ ಕೈಗೆ ಸಿಕ್ಕವರನ್ನೆಲ್ಲ ತಿಂದು ಬದುಕುತ್ತಿದ್ದ. ರಾಮ ಸೀತೆ ಲಕ್ಷ್ಮಣ ವನವಾಸಕ್ಕೆ ಬಂದು, ರಾವಣ ಸೀತೆಯನ್ನು ಅಪಹರಿಸಿದ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಬರುತ್ತಿದ್ದಾಗ ಕಬಂಧನ ಕೈಗೆ ಸಿಕ್ಕಿಬಿದ್ದರು. ನಂತರ ಇವನ ತೋಳುಗಳನ್ನು ಕತ್ತರಿಸಿದರು. ಕಬಂಧ ರಾಮಲಕ್ಷ್ಮಣರ ವೃತ್ತಾಂತವನ್ನು ಕೇಳಿ, ತನ್ನ ವಿಷಯವನ್ನು ಅವರಿಗೆ ತಿಳಿಸಿ, ರಾಮನೇ ತನ್ನ ಅಂತ್ಯಸಂಸ್ಕಾರವನ್ನು ಮಾಡಬೇಕು ಎಂದು ಹೇಳಿ ಪ್ರಾಣವನ್ನು ಬಿಟ್ಟ. ರಾಮ ಈತನ ಸಂಸ್ಕಾರ ಮಾಡಿದ ಬಳಿಕ ಗಂಧರ್ವ ರೂಪವನ್ನು ಹೊಂದಿ, ಸೀತೆಯನ್ನು ರಾವಣ ಅಪಹರಿಸಿದ್ದಾನೆ ಎಂದು ತಿಳಿಸಿದ. ಸುಗ್ರೀವನೊಂದಿಗೆ ಸ್ನೇಹವನ್ನು ಮಾಡಿದಲ್ಲಿ ಆತ ಸಹಾಯ ಮಾಡಬಲ್ಲ ಎಂದೂ ತಿಳಿಸಿದ ನಂತರ ತನ್ನ ಲೋಕಕ್ಕೆ ತೆರಳಿದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ