5 ಅಷ್ಟಾವಕ್ರನ ಕಥೆ Ashtavakrana Kathe


ಅಷ್ಟಾವಕ್ರ

ಕಹೋಳ ಎಂಬ ಮುನಿಯ ಪುತ್ರನೇ ಅಷ್ಟಾವಕ್ರ. ಈತನ ತಾಯಿ ಉದ್ಧಾಲಕ ಮುನಿಯ ಮಗಳಾದ ಸುಜಾತ ಎಂಬುವಳು. ತಾಯಿಯ ಗರ್ಭದಲ್ಲಿದ್ದಾಗ ಈತನ ತಂದೆಯಾದ ಕಹೋಳ ಮುನಿ ವೇದಾಧ್ಯಯನವನ್ನು ಮಾಡುತ್ತಾ ತಪ್ಪು ಸ್ವರವನ್ನು ನುಡಿಯಲು ಗರ್ಭದಲ್ಲಿದ್ದ ಶಿಶು ನಕ್ಕಿತು. ಇದನ್ನು ತಿಳಿದು ಸಿಟ್ಟುಗೊಂಡ ಕಹೋಳ ಮುನಿ, ಅಷ್ಟಾವಕ್ರ ನಾಗಿ ಜನಿಸುವಂತೆ ಶಾಪವನ್ನು ನೀಡಿದ. ಮಗು ಹುಟ್ಟುವ ಮೊದಲೇ ಕಹೋಳ ಮುನಿ ಜನಕರಾಜನ ಯಜ್ಞದಲ್ಲಿ ಬಂದಿ ಎಂಬ ಪಂಡಿತ ನೊಂದಿಗೆ ವಾದ ಮಾಡಿ ಸೋತು, ಜಲಾಧಿವಾಸ ಅನುಭವಿಸಿದ. ಬಂದಿ ವಾದದಲ್ಲಿ ಸೋತವರನ್ನು ನೀರಿನಲ್ಲಿ ಮುಳುಗಿಸಿ ಮರಣವನ್ನು ಹೊಂದುವಂತೆ ಮಾಡುತ್ತಿದ್ದನು ಎಂಬ ಪ್ರತೀತಿ ಇತ್ತು. ಹಾಗಾಗಿ ಕಹೋಳ ಮರಣಿಸಿರಬಹುದು ಎಂದೇ ಎಲ್ಲರೂ ತಿಳಿದರು. ಇತ್ತ ಹುಟ್ಟುತ್ತಲೇ ತಂದೆಯ ಶಾಪದಿಂದ ದೇಹದಲ್ಲಿ ಎಂಟು ಊನತೆಗಳನ್ನು ಹೊಂದಿದ್ದ ಅಷ್ಟಾವಕ್ರ ವೇದ, ವೇದಾಂತ, ಶಾಸ್ತ್ರಗಳಲ್ಲಿ ಬಾಲ್ಯದಲ್ಲಿಯೇ ಪರಿಣಿತಿಯನ್ನು ಪಡೆದ. ತಾಯಿಯಿಂದ ತನ್ನ ತಂದೆಯ ಬಗ್ಗೆ ತಿಳಿದ ಅಷ್ಟಾವಕ್ರ, ಜನಕ ಮಹಾರಾಜನ ಯಜ್ಞಕ್ಕೆ ತೆರಳಿ, ಬಂದಿಯೊಡನೆ ವಾದ ಮಾಡಿ ಆತನನ್ನ ಸೋಲಿಸಿದ. ವಾದದಲ್ಲಿ ಸೋತ ಬಂದಿ ತನ್ನ ನಿಜವೃತ್ತಾಂತವನ್ನು ಈ ರೀತಿಯಾಗಿ ತಿಳಿಸಿದ ಬಂದಿ ವರುಣನ ಮಗ. ವರುಣಲೋಕದಲ್ಲಿ ನಡೆಯುವ ಯಾಗಕ್ಕೆ ಶ್ರೇಷ್ಠ ಪಂಡಿತರನ್ನು ವಿದ್ವಾಂಸರನ್ನು ಕಳುಹಿಸಲು, ಪಂಡಿತರನ್ನು ವಾದದಲ್ಲಿ ಸೋಲಿಸಿ ನೀರಿನಲ್ಲಿ ಮುಳುಗಿಸಿ ವರುಣ ಲೋಕಕ್ಕೆ ಕಳುಹಿಸುತ್ತಿದ್ದ. ಹೀಗೆ ಕಹೋಳ ಮುನಿಯನ್ನು ಕೂಡ ನೀರಿನಲ್ಲಿ ಮುಳುಗಿಸಿ ವರುಣ ಲೋಕಕ್ಕೆ ಕಳುಹಿಸಿದ್ದ. ಅಷ್ಟಾವಕ್ರ ಬಂಧಿಯನ್ನು ವಾದದಲ್ಲಿ ಸೋಲಿಸಿ ತನ್ನ ತಂದೆಯನ್ನು ಕರೆದುಕೊಂಡು ಬಂದನು, ಹಾಗೆಯೇ ತಂದೆಯ ಸೂಚನೆಯಂತೆ ಸಮಂಗಾ ಎಂಬ ನದಿಯಲ್ಲಿ ಸ್ನಾನ ಮಾಡಿ ತನ್ನ ದೇಹದ ವಕ್ರತೆಯನ್ನು ಕಳೆದುಕೊಂಡನು.


ಕಾಮೆಂಟ್‌ಗಳು