ಭೂತಿ ಮುನಿಯ ಕಥೆ
ಹಿಂದೆ ಭೂತಿ ಎಂಬ ಮಹಾತಪಸ್ವಿಯಾದ ಮುನಿ ಇದ್ದರು. ಅವರು ಶೀಘ್ರಕೋಪಿ. ಸೂರ್ಯಚಂದ್ರರು ಋತುಗಳು ಪ್ರಕೃತಿ ಕೂಡ ಅವರ ಮನೋವೃತ್ತಿಯನ್ನು ಅನುಸರಿಸಿ ನಡೆಯುತ್ತಿದ್ದರು. ಸಕಲ ನದಿ ತೀರ್ಥಗಳು ಈ ಮುನಿಯ ಕಮಂಡಲದಲ್ಲಿ ನೆಲೆಸಿದ್ದವು. ಅವರು ಸಂತಾನವನ್ನು ಪಡೆಯಬೇಕು ಎಂಬ ಅಪೇಕ್ಷೆಯಿಂದ ತಪಸ್ಸನ್ನು ಮಾಡತೊಡಗಿದರು. ಇವರಿಗೆ ಹೆದರಿ ಸೂರ್ಯಚಂದ್ರರೂ ಅವರಿಗೆ ಬಳಕೆಯಾಗದಂತೆ ನಡೆಯುತ್ತಿದ್ದರು. ಆದರೆ ಹಸಿವು ನೀರಡಿಕೆ ಗಳನ್ನು ತಡೆಯಲಾರದೆ ಅವರು ತಪಸ್ಸನ್ನು ಅರ್ಧದಲ್ಲಿಯೇ ಕೈಬಿಟ್ಟರು. ಒಮ್ಮೆ ಸುವರ್ಚ ಎಂಬ ಮುನಿಗಳು ಯಜ್ಞವನ್ನು ಮಾಡಲು ಇವರನ್ನು ಕರೆಸಿದರು. ಆಗ ಭೂತಿ ಮುನಿಗಳು ತನ್ನ ಆಶ್ರಮದ ಯಜ್ಞಶಾಲೆಯಲ್ಲಿ ಇದ್ದ ಅಗ್ನಿಯನ್ನು ನೋಡಿಕೊಳ್ಳಲು ತನ್ನ ಶಿಷ್ಯರಲ್ಲಿ ಉತ್ತಮನಾದ ಶಾಂತಿ ಎಂಬ ಮುನಿಯನ್ನು ನಿಯಮಿಸಿ ಯಜ್ಞಕ್ಕೆ ತೆರಳಿದರು. ಶಾಂತಿ ಮುನಿ ಒಮ್ಮೆ ಪೂಜಾದ್ರವ್ಯಗಳನ್ನು ಹಾಗೂ ಸಮಿತ್ತುಗಳನ್ನು ತರಲು ಕಾಡಿಗೆ ಹೋದಾಗ ಅಗ್ನಿ ಶಾಂತವಾಯಿತು. ಗುರುವಿನ ಕೋಪದ ಪ್ರಕೃತಿಯನ್ನು ತಿಳಿದಿದ್ದ ಶಾಂತಿ ಮುನಿ ಅಗ್ನಿದೇವನನ್ನು ಪ್ರಾರ್ಥಿಸಿ ಆತ ಪುನಹ ಜ್ವಲಿಸುವಂತೆ ಮಾಡಿದ. ಅಗ್ನಿ ಪ್ರೀತನಾಗಿ ಅನೇಕ ವರಗಳನ್ನು ನೀಡಿದ, ಹಾಗೂ ಗುರುವಿಗೆ ಸಂತಾನ ವಾಗುವಂತೆ ಶಾಂತಿ ಮುನಿಯು ಅಗ್ನಿಯನ್ನು ಪ್ರಾರ್ಥಿಸಿದ. ಮುನಿಗಳು ಹಿಂತಿರುಗಿ ಬಂದರು. ಶಿಷ್ಯನ ಮುಖದಲ್ಲಿದ್ದ ದಿವ್ಯ ತೇಜಸ್ಸನ್ನು ಕಂಡು ವಿಸ್ಮಿತರಾಗಿ ವೃತ್ತಾಂತವನ್ನೆಲ್ಲಾ ತಿಳಿದು ಸಂತೋಷದಿಂದ ಶಿಷ್ಯನನ್ನು ಆಲಂಗಿಸಿ, ಆತನಿಗೆ ಎಲ್ಲಾ ವೇದವೇದಾಂತ ರಹಸ್ಯ ಗಳನ್ನು ಕೂಡ ಅನುಗ್ರಹಿಸಿದರು. ಹಾಗೆಯೇ ಅಗ್ನಿದೇವನ ವರದಿಂದ ಮಗನನ್ನು ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ