ಇಂದ್ರದ್ಯುಮ್ನ ಮಹಾರಾಜ
ಹಿಂದೆ ಇಂದ್ರದ್ಯುಮ್ನ ಎಂಬ ರಾಜ ಬಹುಕಾಲ ರಾಜ್ಯವನ್ನಾಳಿದ. ಈತ ತನ್ನ ಜೀವಿತಕಾಲದಲ್ಲಿ ಅನೇಕ ಪುಣ್ಯ ಕಾರ್ಯಗಳನ್ನು ಮಾಡಿ ಆನಂತರ ತನ್ನ ಪುಣ್ಯ ಪ್ರಭಾವದಿಂದ ದೇವಲೋಕಕ್ಕೆ ತೆರಳಿದ. ಅಲ್ಲಿ ಈತ ಬಹು ದೀರ್ಘಕಾಲ ವಾಸವಾಗಿರಲು ದೇವತೆಗಳು ಭೂಮಿಯಲ್ಲಿ ಇವನ ಕೀರ್ತಿ ಮಾಸಿಹೋಗಿದೆ ಎಂದು ಇವನನ್ನು ಭೂಮಿಗೆ ಕಳುಹಿಸಿದರು. ಇಂದ್ರದ್ಯುಮ್ನ ಭೂಲೋಕಕ್ಕೆ ಬಂದು ನೋಡಲು ಎಲ್ಲವೂ ಹೊಸದಾಗಿ ಕಂಡುಬಂದಿತ್ತು. ಈತನ ಆಡಳಿತದ ಕುರುಹುಗಳೆಲ್ಲಾ ನಾಶವಾಗಿದ್ದವು ಈತ ತನ್ನ ಪರಿಚಿತರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸುತ್ತಾ ಬರಲಾಗಿ, ದೀರ್ಘಕಾಲದಿಂದ ವಾಸವಾಗಿದ್ದ ಮಾರ್ಕಂಡೇಯ ಮುನಿ, ಪ್ರಾವಾರಕರ್ಣ ಎಂಬ ಗೂಬೆ, ನಾಳೀಜಂಘ ಎಂಬ ಬಕಪಕ್ಷಿ, ಅಕೂಪಾರ ಎಂಬ ಆಮೆ ಹಾಗೂ ಲೋಮಶ ಮುನಿ ಇವರನ್ನೆಲ್ಲ ವಿಚಾರಿಸುತ್ತ ಬರಲಾಗಿ, ಅಕೂಪಾರ ಎಂಬ ಆಮೆ ಈತನನ್ನು ಗುರುತಿಸಿ, ಈತನ ಕೀರ್ತಿಯನ್ನು ಹಾಗೂ ವಾಸವಿದ್ದ ಸರೋವರದ ಪರಿಚಯವನ್ನು ಮಾಡಿಕೊಟ್ಟಿತ್ತು. ಸರೋವರದ ಹೆಸರು ಇಂದ್ರದ್ಯುಮ್ನಸರೋವರ. ಹಿಂದೆ ಇಂದ್ರದ್ಯುಮ್ನ ಮಹಾರಾಜ ಲಕ್ಷಗಟ್ಟಲೆ ಗೋವುಗಳನ್ನು ದಾನಮಾಡುವಾಗ ದಾನೋದಕದ ಪ್ರವಾಹವೇ ಹರಿಯಿತು. ಇದನ್ನು ಗೋವುಗಳು ತುಳಿದುದರಿಂದ ಅಲ್ಲೊಂದು ಸರೋವರವು ಏರ್ಪಟ್ಟಿತು. ಅದರಲ್ಲಿ ಈ ಅಕೂಪಾರ ಎಂಬ ಆಮೆಗಳ ರಾಜ ನೆಲೆಸಿದ್ದ. ಆತ ಇಂದ್ರದ್ಯುಮ್ನನ ಕೀರ್ತಿಯನ್ನು ಪುನಃ ಹೋಗಳಿದ್ದರಿಂದ ದೇವತೆಗಳು ಮರಳಿ ಈತನನ್ನು ತಮ್ಮ ಲೋಕಕ್ಕೆ ಕರೆಯಿಸಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ