ಅಗಸ್ತ್ಯ ಮಹರ್ಷಿಗಳ ಕಥೆ
ಅಗಸ್ತ್ಯರು ಬ್ರಹ್ಮಶ್ರೀ ಪುಲಸ್ತ್ಯನ ಮಗ. ಅಗಸ್ತ್ಯ ಮಹರ್ಷಿಗಳ ಪತ್ನಿ ಲೋಪಾಮುದ್ರೆ. ಒಮ್ಮೆ ಲೋಪಮುದ್ರೆ ವಿಲಾಸದ ಜೀವನಕ್ಕಾಗಿ ಅಪೇಕ್ಷೆ ಪಡಲು, ಅಗಸ್ತ್ಯರು ಸಂಪಾದನೆಗೆ ಹೊರಟು ಅನೇಕ ರಾಜರನ್ನು ಸಂಧಿಸಿ, ಅವರ ರಾಜ್ಯಗಳಲ್ಲಿ ಆಯವ್ಯಯ ಸರಿಯಾಗಿ ಇದ್ದುದನ್ನು ತಿಳಿದು, ಅಧಿಕ ಧನವಂತನಾಗಿದ್ದಂತಹ ದೈತ್ಯ ರಾಜನಾದ ಇಲ್ವಲನ ಬಳಿ ಬರುತ್ತಾರೆ.
ಇಲ್ವಲನು ತನ್ನ ಸಹೋದರನಾದ ವಾತಾಪಿಯ ಜೊತೆಗೂಡಿ ಋಷಿಮುನಿಗಳ ನಾಶವನ್ನು ಮಾಡುತ್ತಿದ್ದ. ಮೊದಲು ವಾತಾಪಿ ಆಡಿನ ರೂಪ ತಾಳಿದರೆ, ಇಲ್ವಲನು ಆಡಿನ ಅಡಿಗೆಯನ್ನು ಮಾಡಿ ಬಡಿಸಿ, ಋಷಿಮುನಿಗಳ ಊಟವಾದ ನಂತರ ವಾತಾಪಿಯನ್ನು ಕರೆಯುತ್ತಿದ್ದ. ವಾತಾಪಿ ಮುನಿಗಳ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಆನಂತರ ಇಬ್ಬರೂ ಸೇರಿ ಮುನಿಗಳನ್ನು ಭಕ್ಷಿಸುತ್ತಿದ್ದರು.
ಹೀಗೆಯೇ ಅಗಸ್ತ್ಯರು ಬಂದಾಗ ಕೂಡ ವಾತಾಪಿಯು ಆಡಿನ ರೂಪ ತಾಳಿದರೆ, ಇಲ್ವಲ ಆತನನ್ನು ಕತ್ತರಿಸಿ ಅಡಿಗೆಯನ್ನ ಮಾಡಿ ಅಗಸ್ತ್ಯರಿಗೆ ಉಣ ಬಡಿಸಿದ. ತಮ್ಮ ಜ್ಞಾನದಿಂದ ಇದನ್ನು ತಿಳಿದ ಅಗಸ್ತ್ಯರು ತಮ್ಮ ಹೊಟ್ಟೆಯಲ್ಲಿದ್ದ ವಾತಾಪಿಗೆ ಜೀರ್ಣವಾಗು ಎಂದರು. ವಾತಾಪಿ ಅಲ್ಲಿಯೇ ನಾಶವಾದ ಹಾಗೂ ಇಲ್ವಲನನ್ನು ಕೂಡ ತಮ್ಮ ತಪೋಮಹಿಮೆಯಿಂದ ಸುಟ್ಟು ಬೂದಿ ಮಾಡಿದರು. ಹೀಗೆ ಅಗಸ್ತ್ಯರು ತಮ್ಮ ಮಹಿಮೆಯಿಂದ ಲೋಕಕಂಟಕರಾದ ದೈತ್ಯರನ್ನು ಸಂಹರಿಸಿದರು ಹಾಗೂ ಅಪೇಕ್ಷಿತ ಧನವನ್ನು ಕೂಡ ಪಡೆದುಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ