19 ವಿನತೆಯ ಕಥೆ Vinateya Kathe

 ವಿನತೆ ದಕ್ಷಬ್ರಹ್ಮನ ಮಗಳು. ಕಶ್ಯಪ ಮುನಿಯ ಪತ್ನಿ. ಈಕೆ ಗರ್ಭವತಿ ಆಗಿದ್ದಾಗ ಅನೇಕ ವರ್ಷ ಕಳೆದರೂ ಮಗು ಜನಿಸಲಿಲ್ಲ.  ಸವತಿಯಾದ ಕದ್ರುವಿಗೆ ಮಕ್ಕಳಾದರು. ಇದರಿಂದ ಚಿಂತಿತಳಾದ ವಿನತೆ ಕುತೂಹಲದಿಂದ ಹೊಟ್ಟೆಯನ್ನು ಹಿಸುಕಿದಾಗ ಅರ್ಧ ಬೆಳವಣಿಗೆ ಆಗಿದ್ದ ಮಗು ಅರುಣ ಹುಟ್ಟಿದ. ಈತ ತಾಯಿಗೆ ನೀನು ಬೆಳೆಯುವ ಮೊದಲೇ ಗರ್ಭವನ್ನು ಒಡೆದಿದ್ದ ಅಪರಾಧಕ್ಕೆ ಸವತಿಯ ದಾಸಿಯಾಗು ಎಂದು ಶಪಿಸಿದ. ಒಮ್ಮೆ ಕದ್ರು ಮತ್ತು ವಿನತೆ ಇಬ್ಬರೂ ಸಮುದ್ರತೀರದಲ್ಲಿ ಸಂಚರಿಸುತ್ತಿದ್ದಾಗ  ವಿನತೆ ಕದ್ರುವಿಗೆ ದೂರದಲ್ಲಿ ಮೇಯುತ್ತಿದ್ದ ಇಂದ್ರನ ಪಟ್ಟದ ಕುದುರೆ ಉಚ್ಚೈಃಶ್ರವಸ್ಸನ್ನು ತೋರಿಸಿ, ಕುದುರೆ ಎಷ್ಟು ಬೆಳ್ಳಗಿದೆ ನೋಡು ಎಂದಳು. ಆಗ ಕದ್ರು ಅದನ್ನು ಒಪ್ಪದೇ ಬೆನ್ನ ಮೇಲೆ ಕಪ್ಪಾದ ಗೆರೆ ಇದೆ ಎಂದಳು ಆಗ ಸಾಯಂಕಾಲವಾಯಿತು. ಇವರ ವಾಗ್ವಾದ ಮುಂದುವರೆಯಿತು ಹಾಗೆಯೇ ಕುದುರೆ ಬೆಳ್ಳಗಿದ್ದರೆ ಕದ್ರು ವಿನತೆಯ ದಾಸಿಯಾಗುವುದು, ಕಪ್ಪಾದ ಗೆರೆ ಇದ್ದರೆ ವಿನತೆ ಕದ್ರುವಿಗೆ ದಾಸಿ ಆಗುವುದೆಂದೂ, ಕುದುರೆಯನ್ನು ಮರುದಿನ ಬೆಳಗಾಗುತ್ತಲೇ ನೋಡುವುದಾಗಿಯೂ ಮಾತನಾಡಿಕೊಂಡು ಮನೆಗೆ ಬಂದರು. ಕದ್ರು ರಾತ್ರಿಯಲ್ಲಿ ತನ್ನ ಮಕ್ಕಳಾದ ನಾಗಗಳನ್ನು ಕರೆದು, ವಿನತೆಯ ಜೊತೆ ಆದ ವಾಗ್ವಾದವನ್ನು ವಿವರಿಸಿ, ನೀವು ಯಾರಾದರೂ ಕುದುರೆಯ ಕತ್ತಿನಿಂದ ಬಾಲದವರೆಗೆ ಜೋತುಬಿದ್ದು ನಾವಿಬ್ಬರೂ ಬಂದು ನೋಡುವಾಗ ಉಚ್ಚೈಃಶ್ರವಸ್ಸಿನ ಬೆನ್ನಮೇಲೆ ಕಪ್ಪಾದ ಗೆರೆ ಇರುವಂತೆ ಕಾಣಿಸಬೇಕು ಎಂದಳು. ಕೆಲವು ಮಕ್ಕಳು ಈ ಅಧರ್ಮ ಕಾರ್ಯವನ್ನು ಮಾಡಲು ಒಪ್ಪಿಕೊಳ್ಳಲಿಲ್ಲ. ಅವರನ್ನು ಕದ್ರು ಯಜ್ಞದಲ್ಲಿ ಬಲಿಯಾಗುವಂತೆ ಶಾಪವಿತ್ತಳು. ಉಳಿದ ಕೆಲವು ಮಕ್ಕಳು ಹೆದರಿ ತಾಯಿ ಹೇಳಿದಂತೆ ಕೇಳಿದವು.  ಮರುದಿನ ಬೆಳಿಗ್ಗೆ ಉಚ್ಚೈಃಶ್ರವಸ್ಸನ್ನು ನೋಡಿದಾಗ ಕಪ್ಪಾದ ಗೆರೆ ಬೆನ್ನ ಮೇಲೆ ಇರುವಂತೆ ಕಂಡು, ಕದ್ರುವಿಗೆ ವಿನತೆ ದಾಸಿ ಆಗಬೇಕಾಯಿತು. ಆನಂತರ ಅನೇಕ ವರ್ಷಗಳ ಬಳಿಕ ವಿನತೆಗೆ ಹುಟ್ಟಿದ ಪ್ರತಾಪಶಾಲಿ ಮಗ ಗರುಡನಿಂದ ಇವಳಿಗೆ ದಾಸ್ಯದಿಂದ ಮುಕ್ತಿ ದೊರಕಿತು


ಕಾಮೆಂಟ್‌ಗಳು