ಖಾಂಡಿಕ್ಯ
ವಿದೇಹ ವಂಶದ ಧರ್ಮಧ್ವಜ ಜನಕನಿಗೆ ಇಬ್ಬರು ಮಕ್ಕಳು. ಮೊದಲನೆಯವನು ಕೃತಧ್ವಜ ಹಾಗೆಯೇ ಎರಡನೆಯವನು ಮಿತ್ರಧ್ವಜ. ಮಿತ್ರಧ್ವಜನಿಗೆ ಖಾಂಡಿಕ್ಯ ಎಂಬ ಹೆಸರೂ ಇದೆ. ಧರ್ಮಧ್ವಜನ ನಂತರ ಮಕ್ಕಳಿಬ್ಬರೂ ರಾಜ್ಯವನ್ನು ಹಂಚಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಕಾಲಾನಂತರದಲ್ಲಿ ಕೃತಧ್ವಜನ ಮಗನಾದ ಕೇಶಿಧ್ವಜ ಎಂಬುವವನು ತನ್ನ ಚಿಕ್ಕಪ್ಪನಾದ ಖಾಂಡಿಕ್ಯನ ಮೇಲೆ ದಂಡೆತ್ತಿ ಹೋದ. ಖಾಂಡಿಕ್ಯನನ್ನು ಸೋಲಿಸಿ ಅವನ ರಾಜ್ಯವನ್ನು ಕೋಶವನ್ನು ಕಿತ್ತುಕೊಂಡು ಖಾಂಡಿಕ್ಯನನ್ನು ಕಾಡಿಗೆ ಅಟ್ಟಿದ. ಖಾಂಡಿಕ್ಯ ಅರಣ್ಯದಲ್ಲಿಯೇ ತಪಸ್ವಿಯಾದ. ಒಮ್ಮೆ ಕೇಶಿಧ್ವಜ ದೊಡ್ಡದಾದ ಯಜ್ಞವನ್ನು ಕೈಗೊಂಡ. ಯಜ್ಞ ನಡೆಯುತ್ತಿರುವಾಗ ಮಧ್ಯದಲ್ಲಿಯೇ ಯಜ್ಞಪಶುವನ್ನು ಒಂದು ಹುಲಿ ನುಂಗಿಬಿಟ್ಟಿತು. ಇದರಿಂದ ಯಜ್ಞಕ್ಕೆ ಭಂಗ ಬಂತು. ಕರ್ತವ್ಯಶೂನ್ಯನಾದ ಕೇಶಿಧ್ವಜ ಇದಕ್ಕೆ ಪ್ರಾಯಶ್ಚಿತ್ತವೇನು ಎಂದು ವಿಚಾರಿಸತೊಡಗಿದ. ಮುನಿಯಾದ ಚಿಕ್ಕಪ್ಪ ಖಾಂಡಿಕ್ಯನ ಬಳಿ ಉತ್ತರ ಸಿಗಬಹುದು ಎಂದು ತಿಳಿದು ಖಾಂಡಿಕ್ಯನ ಆಶ್ರಮದ ಬಳಿ ತೆರಳಿದ. ಖಾಂಡಿಕ್ಯನಾದರೋ ದೂರದಿಂದಲೇ ಕೇಶಿಧ್ವಜ ಬರುತ್ತಿರುವುದನ್ನು ನೋಡಿ ತಿಳಿದು ಹಳೆಯ ವೈರವನ್ನೇನೂ ಇಟ್ಟುಕೊಳ್ಳದೆ ಅವನನ್ನು ಪ್ರೀತಿಯಿಂದಲೇ ಕಂಡು ಓಡಿ ಬಂದು ಮುದ್ದಾಡಿ ಕುಳ್ಳಿರಿಸಿ, ಕುಶಲ ಪ್ರಶ್ನೆಗಳನ್ನು ಮಾಡಿ ಬಂದ ಸಮಾಚಾರವನ್ನು ಕೇಳಿದ. ಕೇಶಿಧ್ವಜ ನಡೆದ ವಿಚಾರವನ್ನು ತಿಳಿಸಲಾಗಿ ಕೇಶಿಧ್ವಜನಿಗೆ ಮುಂದೆ ಮಾಡಬೇಕಾದ ಕರ್ತವ್ಯವನ್ನು ತಿಳಿಹೇಳಿದ. ಇದರಿಂದ ಸಂತುಷ್ಠನಾದ ಕೇಶಿಧ್ವಜ ಗುರುದಕ್ಷಿಣೆಯನ್ನು ಕೊಡುವೆನು ಬೇಕಾದುದನ್ನು ಕೇಳು ಎಂದಾಗ ಖಾಂಡಿಕ್ಯ ತನ್ನ ರಾಜ್ಯ ಕೋಶಗಳನ್ನು ಹಿಂದಿರುಗಿ ಕೊಡು ಎಂದು ಕೇಳಲಿಲ್ಲ ಬದಲಾಗಿ ಅನೇಕ ಯೋಗರಹಸ್ಯಗಳನ್ನು ಕೇಶಿಧ್ವಜನಿಂದ ಕೇಳಿ ತಿಳಿದ. ಹಾಗೆಯೇ ಲೌಕಿಕ ಜೀವನಕ್ಕೆ ಹಿಂತಿರುಗದೇ ಮುನಿಯಾಗಿಯೇ ತನ್ನ ಜೀವನವನ್ನು ಮುಂದುವರೆಸಿ ಭಗವಂತನ ಅನುಗ್ರಹವನ್ನು ಪಡೆದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ