ಗಯ ಎಂಬ ಗಂಧರ್ವ
ಈತ ಮಣಿಪುರದ ಅರಸ. ಶಿವಭಕ್ತಾಗ್ರೇಸರನಾದ ಈತ ಕೈಲಾಸಕ್ಕೆ ಹೋಗಿ ಶಿವಪೂಜೆಯನ್ನು ಮಾಡುತ್ತಿದ್ದ. ಒಮ್ಮೆ ಕೈಲಾಸದಲ್ಲಿ ಶಿವ ಪೂಜೆಯನ್ನು ಮುಗಿಸಿ ಹಿಂದಿರುಗಿ ತನ್ನ ಮಡದಿ ಮಕ್ಕಳೊಂದಿಗೆ ವಿಮಾನದಲ್ಲಿ ಕುಳಿತು ಬರುತ್ತಿದ್ದ. ಹೀಗೆ ಬರುತ್ತಿರುವಾಗ ಈತ ಕರ್ಪೂರ, ವೀಳ್ಯ, ತಾಂಬೂಲವನ್ನು ಸೇವಿಸುತ್ತಿದ್ದ. ಈತ ತಾಂಬೂಲವನ್ನು ವಿಮಾನದಿಂದ ಕೆಳಗೆ ಉಗುಳಿದ. ದುರ್ದೈವದಿಂದ ಆ ಉಗುಳಿದ ತಾಂಬೂಲವು ಸೂರ್ಯನಿಗೆ ಅರ್ಘ್ಯವನ್ನು ಕೊಡಲು ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು ಕಣ್ಮುಚ್ಚಿ ನಿಂತಿದ್ದ ಶ್ರೀಕೃಷ್ಣನ ಬೊಗಸೆಯಲ್ಲಿ ಬಿದ್ದಿತು. ಇದೇನು ಎಂದು ಶ್ರೀಕೃಷ್ಣ ಕಣ್ತೆರೆದು ನೋಡಿದಾಗ ಬೊಗಸೆಯಲ್ಲಿದ್ದ ನೀರೆಲ್ಲ ಕೆಂಪಾಗಿದ್ದಿತು. ಇದರಿಂದ ಕ್ರುದ್ಧನಾದ ಶ್ರೀಕೃಷ್ಣ ಇಂತಹ ಅಪರಾಧವನ್ನು ಮಾಡಿದವನನ್ನು ಕೊಲ್ಲದೇ ಬಿಡೆನು ಎಂದು ಪ್ರತಿಜ್ಞೆ ಮಾಡಿದ. ಈ ಸುದ್ದಿ ಗಯನಿಗೂ ತಲುಪಿತು. ಗಯ ಇದರಿಂದ ಭಯಭೀತನಾದ. ಎಲ್ಲಾ ದೇವತೆಗಳಲ್ಲಿಯೂ ತನ್ನನ್ನು ರಕ್ಷಿಸುವಂತೆ ಬೇಡಿದ. ಆದರೆ ಯಾರೂ ಇವನಿಗೆ ಅಭಯವನ್ನು ನೀಡಲಿಲ್ಲ. ದಾರಿಕಾಣದ ಈತನಿಗೆ ನಾರದರು ಸೂಚನೆಯನ್ನು ನೀಡಿದರು. ಅಂತೆಯೇ ಗಯ ಅರ್ಜುನನ ಮೊರೆಹೋದ. ಹಾಗೂ ಅಭಯವನ್ನು ಬೇಡಿದ. ಅರ್ಜುನನಾದರೋ ಪೂರ್ವಾಪರಗಳನ್ನೂ ಯೋಚಿಸದೆ ಗಯನಿಗೆ ಅಭಯವನ್ನು ನೀಡಿದ. ಗಯನ ವಿಚಾರವನ್ನು ತಿಳಿದು ದುಡುಕಿ ಅಭಯಪ್ರದಾನ ಮಾಡಿದ್ದರಿಂದ ಅರ್ಜುನ ತನ್ನ ಅವಿವೇಕವನ್ನೇ ಹಳಿದುಕೊಳ್ಳುತ್ತಿದ್ದ. ಭೀಮ, ಯುಧಿಷ್ಠಿರಾದಿಗಳು ಚಿಂತಿತರಾದರು. ಅರ್ಜುನ ಗಯನಿಗೆ ಅಭಯಪ್ರಧಾನ ಮಾಡಿದ ವಿಷಯ ನಾರದರಿಂದ ಶ್ರೀಕೃಷ್ಣನಿಗೆ ತಿಳಿಯಿತು. ಶ್ರೀಕೃಷ್ಣ ಈ ಕೂಡಲೇ ಗಯನನ್ನು ತನಗೆ ಬಿಟ್ಟುಕೊಡಬೇಕು ಎಂದು ದೂತನ ಬಳಿ ಹೇಳಿಕಳುಹಿಸಿದ. ಧೀರನಾದ ಅರ್ಜುನ ಮೊರೆಹೋಕ್ಕವರನ್ನು ಬಿಟ್ಟುಕೊಡಲಾರೆ ಎಂದು ಹೇಳಿಕಳುಹಿಸಿದ. ಬಳಿಕ ಕೃಷ್ಣಾರ್ಜುನರು ಯುದ್ಧ ಮಾಡತೊಡಗಿದರು. ಇಬ್ಬರಲ್ಲಿ ಜಯ ಅಪಜಯಗಳು ನಿರ್ಧಾರ ವಾಗಲಿಲ್ಲ. ಆಗ ದೇವತೆಗಳೆಲ್ಲರೂ ಅಲ್ಲಿಗೆ ಬಂದು ಯುದ್ಧವನ್ನು ನಿಲ್ಲಿಸಿ ಕೃಷ್ಣಾರ್ಜುನರನ್ನು ಸಮಾಧಾನಪಡಿಸಿ ಸಂಧಾನ ಮಾಡಿಸಿದರು. ಹಾಗೆಯೇ ಗಯನನ್ನು ಶ್ರೀಕೃಷ್ಣನ ಚರಣಗಳಿಗೆ ಅಡ್ಡ ಬೀಳಿಸಿ ಅಭಯಪ್ರದಾನ ಮಾಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ